ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿ ಮಠದ ಸಪರಿವಾರ ಶ್ರೀರಾಮದೇವರ ದೇವಾಲಯದ ಶಿಲಾಮಯ ಗರ್ಭಗುಡಿ ನಿರ್ಮಾಣ ಮತ್ತು ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬಗ್ಗೆ ಶಿಷ್ಯಭಕ್ತರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ನ,11ರಂದು ಮಾಣಿ ಮಠಕ್ಕೆ ಆಗಮಿಸಲಿದ್ದಾರೆ.
11ರಂದು ಸಂಜೆ 4.30ಕ್ಕೆ ಸ್ವಾಮೀಜಿಯವರು ಆಗಮಿಸಲಿದ್ದು, 12ರಂದು ಮಧ್ಯಾಹ್ನ ನಿರ್ಮಾಣ ಕಾಮಗಾರಿ ವೀಕ್ಷಣೆ ನಡೆಸಿ ಶ್ರೀ ಮಠದ ಸೇವಾ ಸಮಿತಿ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡುವರು. ಮಧ್ಯಾಹ್ನ 2 ಗಂಟೆಗೆ ಶಿಷ್ಯಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡುವರು. ಈ ಸಂದರ್ಭ ಶಿಲಾಮಯ ಗರ್ಭಗುಡಿ ಮತ್ತು ಶ್ರೀಮಠದ ವಿವಿಧ ಯೋಜನೆಗಳಿಗೆ ಭಕ್ತರು ಸಮರ್ಪಣೆ ಮಾಡಲು ಅವಕಾಶವಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಹೇಳಿದ್ದಾರೆ. ಸುಮಾರು ಎರಡು ಕೋಟಿ ರೂಪಾಯಿ ಅಂದಾಜು ವೆಚ್ಚದ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀರಾಮದೇವರ ಪುನಃಪ್ರತಿಷ್ಠೆ 2023ರ ಜನವರಿ 23ರಂದು ನಡೆಯಲಿದ್ದು, 25ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಪುನರ್ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನೂ ಸ್ವಾಮೀಜಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡುವರು.
ಕಾರ್ಯಕ್ರಮಕ್ಕೆ ಸಂಬಂಧಿಸಿ ಮಠದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸೇವಾ ಸಮಿತಿಯ ಬಂಗಾರಡ್ಕ ಜನಾರ್ದನ ಭಟ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪಾಧ್ಯಕ್ಷೆ ಹಾಗೂ ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಮಹಿಳಾ ವಿಭಾಗದ ದೇವಿಕಾ ಶಾಸ್ತ್ರಿ, ಉಪ್ಪಿನಂಗಡಿ ಮಂಡಲದ ಅಧ್ಯಕ್ಷ ಪರಮೇಶ್ವರ ಭಟ್ ಮತ್ತಿತರರು ಭಾಗವಹಿಸಿದ್ದರು.