ಈ ಬಾರಿ ಚುನಾವಣೆಯಲ್ಲಿ ಶೇ.50ರಷ್ಟು ಯುವಕರಿಗೆ ಟಿಕೆಟ್ ಕೊಡಲು ಎಐಸಿಸಿ ತೀರ್ಮಾನಿಸಿದ್ದು, ಬಿಜೆಪಿಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಸೋಮವಾರ ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕುರಿತು ಜನ ಬೇಸತ್ತಿದ್ದು, ಕಾಂಗ್ರೆಸ್ಸನ್ನು ಸೋಲಿಸಿದ್ದಕ್ಕೆ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ರಸ್ತೆ ಹೊಂಡ ಮುಚ್ಚಿಸಲು ಸರಕಾರಕ್ಕೆ ಆಗುತ್ತಿಲ್ಲ ಓರ್ವ ಶಾಸಕನಿಗೆ ತನ್ನ ಕ್ಷೇತ್ರದಲ್ಲಿ ಹೊಂಡ ಮುಚ್ಚಿಸಲು ಕೇವಲ 5 ಲಕ್ಷ ನೀಡಲಾಗಿದೆ. ಕ್ಷೇತ್ರದ ರಸ್ತೆ ಹೊಂಡಗಳನ್ನು 15 ದಿನಗಳಲ್ಲಿ ಮುಚ್ಚಲು ಈಗಾಗಲೇ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದ್ದು, ಒಂದು ಕ್ಷೇತ್ರಕ್ಕೆ ಕೇವಲ 5 ಲಕ್ಷ ರೂ. ನೀಡುವ ಮೂಲಕ ರಾಜ್ಯ ಸರಕಾರಕ್ಕೆ ಗುಂಡಿ ಮುಚ್ಚುವುದಕ್ಕೂ ಅನುದಾನವಿಲ್ಲದ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ ಎಂದು ಖಾದರ್ ಟೀಕಿಸಿದರು. ಉಳ್ಳಾಲ ಕ್ಷೇತ್ರದ ಬಂಟ್ವಾಳ ಭಾಗದ ಶಿಕ್ಷಣ, ಆರೋಗ್ಯ ಮತ್ತು ಕುಡಿಯುವ ನೀರು ಹಾಗೂ ರಸ್ತೆ ನಿರ್ಮಾಣದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಸಜಿಪ ತುಂಬೆ ಬೆಸೆಯುವ ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಹೇಳಿದರು. ನರಿಂಗಾನ ಗ್ರಾಮದ ನೆತ್ತಿಲಪದವುನಲ್ಲಿ ಶಾಶ್ವತ ಕರೆಗಳನ್ನು ನಿರ್ಮಿಸಿ ಕಂಬಳ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಇದರ ಜತೆಗೆ ಸುಮಾರು 5 ಎಕರೆ ಪ್ರದೇಶದಲ್ಲಿ ಸುಮಾರು 5 ಕೋ.ರೂ. ವೆಚ್ಚದಲ್ಲಿ ತುಳು ಗ್ರಾಮ ಸೃಷ್ಟಿಯ ಯೋಜನೆ ಇದೆ ಎಂದರು. ಜಿ.ಪಂ.ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಮುಖರಾದ ಪದ್ಮನಾಭ ನರಿಂಗಾನ, ಅಬ್ದುಲ್ ರಝಾಕ್ ಕುಕ್ಕಾಜೆ, ವೃಂದಾ ಪೂಜಾರಿ, ನಾಸೀರ್ ನಡುಪದವು, ಅರುಣ್ ಡಿಸೋಜ, ರೆಹಮಾನ್, ಫ್ರಾನ್ಸಿಸ್, ಗಣೇಶ್, ಅನಿಲ್, ದಿನೇಶ್ ರಾಮಲ್‌ಕಟ್ಟೆ, ಬಶೀರ್ ಮೊದಲಾದವರಿದ್ದರು