ಬಂಟ್ವಾಳ: ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಈ ಬಾರಿ ರಾಜ್ಯ ಸರಕಾರ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಅಜಿಲಮೊಗರುವಿನಲ್ಲಿ 1961ರಲ್ಲಿ ಜನಿಸಿದ ಅವರು ನಾಟ್ಯಗುರು, ಸಮರ್ಥ ಪಾತ್ರಧಾರಿ, ಯಕ್ಷಪ್ರಸಂಗಗಳ ರಚನಾಕಾರರಾಗಿ, ಯಕ್ಷನಿರ್ದೇಶಕರಾಗಿ ಪ್ರಸಿದ್ಧರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ, ಉತ್ತಮ ನೃತ್ಯಪಟು, ಅರ್ಜುನ, ದೇವೇಂದ್ರ, ರಕ್ತಬೀಜ, ಕೌಂಡ್ಲಿಕ, ಶತ್ರುಘ್ನ, ಇಂದ್ರಜಿತು ಮುಂತಾದವು ಅವರ ಜನಪ್ರಿಯ ಪಾತ್ರಗಳು. ಕಟೀಲು, ಅಳದಂಗಡಿ, ಕದ್ರಿ, ಬಪ್ಪನಾಡು, ಮಂಗಳಾದೇವಿ ಮೇಳಗಳಲ್ಲಿ ತಿರುಗಾಟ ನಡೆಸಿದ ಅವರು, ಮೇಳಗಳಲ್ಲಿ ಕಲಾವಿದನಾಗಿ, ಸಂಚಾಲಕನಾಗಿ ಕಲಾಸೇವೆ ಮಾಡಿದ್ದಾರೆ. ಉಚಿತ ನಾಟ್ಯ ತರಬೇತಿ, ಸಾವಯವ ಕೃಷಿ ವಿಜಯ ಮುಂತಾದ ಆರು ಯಕ್ಷಗಾನ ಪ್ರಸಂಗಗಳ ರಚನೆ, ನಿರ್ದೇಶನ ಮಾಡಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಹಲವು ಸಂಘ, ಸಂಸ್ಥೆಗಳಲ್ಲಿ ದುಡಿದಿರುವ ಅವರಿಗೆ ಹಲವು ಸನ್ಮಾನಗಳು, ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವರ ಸರಪಾಡಿದ ಸರ್ಪೆ ಯಕ್ಷಗಾನ ಅತ್ಯಂತ ಜನಪ್ರಿಯ.