ಬಂಟ್ವಾಳ: ಮೂಡುಬಿದಿರೆಯಲ್ಲಿ ಡಿ.21ರಿಂದ 27ರವರೆಗೆ ನಡೆಯಲಿರುವ ಭಾರತ ಸ್ಕೌಟ್ ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ ಸಿದ್ಧತಾ ಸಭೆ ಹಾಗೂ ಬಂಟ್ವಾಳ ತಾಲೂಕು ಸಮಿತಿ ರಚನೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ದ.ಕ.ಜಿಲ್ಲಾ ಪ್ರಧಾನ ಆಯುಕ್ತ ಡಾ. ಎಂ.ಮೋಹನ ಆಳ್ವ ಈ ಸಂದರ್ಭ ಮಾತನಾಡಿ, ಸುಮಾರು 50 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿರುವ ಸಮಾರಂಭದಲ್ಲಿ ದಿನನಿತ್ಯ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, 35 ಕೋಟಿ ರೂ ವೆಚ್ಚ ತಗಲಲಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ದೇಣಿಗೆಯನ್ನು ಸಾರ್ವಜನಿಕರು ನೀಡಿ ಸಹಕರಿಸಬೇಕು ಎಂದು ವಿನಂತಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭಾಗವಹಿಸಿ, ಗಣ್ಯರ ಸಮಕ್ಷಮ ತಾಲೂಕು ಸಮಿತಿಯ ಪಟ್ಟಿಯನ್ನು ಪ್ರಕಟಿಸಿದರು. ಗೌರವ ಮಾರ್ಗದರ್ಶಕರಾಗಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಪೊಳಲಿ ತಪೋವನದ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ, ಬಂಟ್ವಾಳ ಕೆಥೊಲಿಕ್ ಧರ್ಮಗುರು ಅ.ವಂ.ಫಾ.ವಲೇರಿಯನ್ ಡಿಸೋಜ, ಎಸ್.ಕೆ.ಎಸ್.ಎಸ್.ಎಫ್. ಬಂಟ್ವಾಳ ವಲಯಾಧ್ಯಕ್ಷ ಇರ್ಷಾದ್ ದಾರಿಮಿ ಮಿತ್ತಬೈಲ್, ಎಸ್.ಎಸ್.ಎಫ್. ಬಂಟ್ವಾಳ ಅಧ್ಯಕ್ಷ ಸಿನಾನ್ ಸಖಾಫಿ, ಗೌರವಾಧ್ಯಕ್ಷರಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಗೌರವ ಸಲಹೆಗಾರರಾಗಿ ತಹಸೀಲ್ದಾರ್ ಡಾ.ಸ್ಮಿತಾ ರಾಮು, ತಾಪಂ ಇಒ ರಾಜಣ್ಣ, ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್, ಬಿಇಒ ಜ್ಞಾನೇಶ್, ಅಧ್ಯಕ್ಷರಾಗಿ ಪ್ರಕಾಶ್ ಕಾರಂತ, ಕಾರ್ಯಾಧ್ಯಕ್ಷರಾಗಿ ಪ್ರಹ್ಲಾದ್ ಶೆಟ್ಟಿ ಜಡ್ತಿಲ, ಆರ್ಥಿಕ ಸಮಿತಿ ಸಂಚಾಲಕರಾಗಿ ಜಗನ್ನಾಥ ಚೌಟ ಬದಿಗುಡ್ಡೆ, ಹೊರೆಕಾಣಿಕೆ ಸಮಿತಿ ಸಂಚಾಲಕರಾಗಿ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಮಹಮ್ಮದ್ ತುಂಬೆ, ಕೋಶಾಧಿಕಾರಿಯಾಗಿ ಐತಪ್ಪ ಪೂಜಾರಿ, ವಿವಿಧ ಸಮುದಾಯಗಳ ಮುಖಂಡರು, ಸಂಘ ಸಂಸ್ಥೆಗಳ ಅಧ್ಯಕ್ಷರು, ವಿವಿಧ ಧಾರ್ಮಿಕ, ಸಾಮಾಜಿಕ ಮುಖಂಡರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಎಲ್ಲರ ಸಮ್ಮುಖದಲ್ಲಿ ಮುಂದಿನ ಯೋಜನೆಯ ಕುರಿತು ಚರ್ಚಿಸಲಾಯಿತು. ಈ ಸಂದರ್ಭ ಸಮಿತಿ ಸದಸ್ಯರ ಸಹಿತ ವಿವಿಧ ಗಣ್ಯರು ಹಾಜರಿದ್ದರು.
ಡಿ.18ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಇರುವ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ತಮ್ಮ ಸಮಾಜ, ಸಂಘ, ಸಂಸ್ಥೆಗಳ ಹೆಸರಿನ ಬ್ಯಾನರ್ ನೊಂದಿಗೆ ಹೊರೆ ಕಾಣಿಕೆ ವಾಹನಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ಈ ಸಂದರ್ಭ ಚಂದ್ರಹಾಸ ಶೆಟ್ಟಿ ರಂಗೋಲಿ ತಿಳಿಸಿದರು. ಟೈಗರ್, ರೋಲರ್ ಬ್ರಾಂಡಿನ ಸ್ಟೀಮ್ಡ್ ಅಕ್ಕಿ, ತರಕಾರಿ, ತೆಂಗಿನಕಾಯಿ, ಬೆಲ್ಲ, ಸಕ್ಕರೆ, ತೊಗರಿ, ಮೆಣಸು ಇನ್ನಿತರ ಸಂಬಾರು ವಸ್ತುಗಳು ಹೊರೆಕಾಣಿಕೆಯಲ್ಲಿ ಇರಲಿವೆ ಎಂದರು. ಐತಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿ, ಬಿ.ಎಂ.ತುಂಬೆ ವಂದಿಸಿದರು.