ಬಂಟ್ವಾಳ: ತುಳು ನಾಟಕ ಕಲಾವಿದರ ಒಕ್ಕೂಟ ಬಂಟ್ವಾಳ ಘಟಕದ ವತಿಯಿಂದ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ತುಳು ನಾಟಕೋತ್ಸವ ಅ. 29ರಿಂದ ನ. 4ರ ವರೆಗೆ ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಘಟಕದ ಸಂಚಾಲಕ ಸುಭಾಶ್ಚಂದ್ರ ಜೈನ್ ತಿಳಿಸಿದರು.
ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಒಟ್ಟು 7 ದಿನಗಳ ಕಾಲ ನಡೆಯುವ ನಾಟಕೋತ್ಸವದಲ್ಲಿ 6 ನಾಟಕಗಳ ನಡುವೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಕ್ರಮವಾಗಿ ಆರ್ ತೂಪೆರ್, ಕೆಂಪು ಗುಲಾಬಿ ಮೋಕೆದ ಸಂಕೇತ, ಪರಿಮಳ ಕಾಲನಿ, ಅಂದ್ಂಡ ಅಂದ್ ಪನ್ಲೆ, ಚಂದ್ರಗ್ರಹಣ, ನನದಾದ ಒರಿಂಡ್ ನಾಟಕಗಳು ಪ್ರದರ್ಶನಗೊಳ್ಳಲಿದೆ. ಸ್ಪರ್ಧೆಯ ಹೊರತಾಗಿ ಕೊನೆಯ ದಿನ ಕೊಪ್ಪರಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ನಾಟಕದ ಪ್ರಾರಂಭದಲ್ಲಿ ತಾಲೂಕಿನ ಹಿರಿಯ ಕಲಾವಿದರಿಗೆ ಸನ್ಮಾನ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ದಿವಾಕರ್‌ದಾಸ್, ಗಜೇಂದ್ರ ಪ್ರಭು ಉಪಸ್ಥಿತರಿದ್ದರು.