ಬಂಟ್ವಾಳ: ಖಾಸಗಿ ಏಜನ್ಸಿಗಳು ವಿಧಿಸಿದ ದುಬಾರಿ ದರವನ್ನು ನೀಡಿ ರಿಫ್ಲೆಕ್ಟರ್ ಸ್ಟಿಕ್ಕರ್ ಹಾಕಿದರಷ್ಟೇ ಫಿಟ್ ನೆಸ್ ಸರ್ಟಿಫಿಕೇಟ್ ಕೊಡುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಬಿ.ರಮಾನಾಥ ರೈ, ಮೆಲ್ಕಾರ್ ನಲ್ಲಿರುವ ಎಆರ್ ಟಿಒ ಕಚೇರಿಗೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳ ಬಳಿ ರಾಜ್ಯ ಸರಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರವು ರಿಫ್ಲೆಕ್ಟರ್ ಸ್ಟಿಕ್ಕರಿನ ಬೆಲೆಯನ್ನು ಸಾವಿರಾರು ರೂ.ಗಳಿಗೆ ಏರಿಸಿ ನಿಗದಿತ ಏಜೆನ್ಸಿಯವರಿಂದಲೇ ಹಾಕಿಸಿಕೊಳ್ಳಬೇಕು ಎಂಬ ಆದೇಶದ ಮೂಲಕ ಬಡ ವಾಹನದವರ ಹೊಟ್ಟೆಗೆ ಹೊಡೆದು ಹಗಲು ದರೋಡೆ ಮಾಡುತ್ತಿದೆ. ಇದನ್ನು ನಿಲ್ಲಿಸದೇ ಇದ್ದಲ್ಲಿ ಆರ್‌ಟಿಒ ಕಚೇರಿಯ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಈ ಸಂದರ್ಭ ಎಚ್ಚರಿಸಿದರು.
ಇಂಥ ಸ್ಟಿಕ್ಕರ್ ಕೈ ಬಿಡಬೇಕು ಎಂದು ಹೇಳಿದ ರೈ, ಸ್ಟಿಕ್ಕರ್ ಹಾಕಿದ ಬಳಿಕ ಏಜೆನ್ಸಿಯವರೇ ಬಿಲ್ಲನ್ನು ನೀಡುತ್ತಿದ್ದು, ಇಲಾಖೆಗೂ ಅದಕ್ಕೂ ಸಂಬಂಧವೇ ಇಲ್ಲವಾಗಿದೆ. ಇದರಿಂದ ಏಜೆನ್ಸಿ ಲಾಭ ಪಡೆದು ಅದರ ಅಂಶವನ್ನು ಯಾರಿಗೋ ನೀಡಬೇಕಾದ ಪರಿಸ್ಥಿತಿ ಇದೆ. ಈಗಾಗಲೇ ಬೆಲೆ ಏರಿಕೆಯಿಂದ ಬಡ ವಾಹನದವರು ಬೇಸತ್ತಿದ್ದು, ಹೀಗಾಗಿ ಈ ರೀತಿ ಸುಲಿಗೆಯನ್ನು ನಿಲ್ಲಿಸಬೇಕು. ಇದು ಮುಂದುವರಿದರೆ ಕಚೇರಿಯ ಮುಂದೆ ಪ್ರತಿಭಟನೆಯನ್ನೂ ಮಾಡಲಿದ್ದೇವೆ ಎಂದರು.
ಈ ಸಂದರ್ಭ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಅಬ್ಬಾಸ್ ಆಲಿ, ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ, ಲೋಕೇಶ ಸುವರ್ಣ ಅಲೆತ್ತೂರು, ಮೋಹನ್ ಶೆಟ್ಟಿ ಮೊದಲಾದವರಿದ್ದರು.
ಫಿಟ್ ನೆಸ್ ಟೆಸ್ಟ್ ಮಾಡಲು ಬಂದ ಟೂರಿಸ್ಟ್ ವಾಹನಗಳಿಗೆ ಸಾರಿಗೆ ಪ್ರಾಧಿಕಾರ ನಿಗದಿಪಡಿಸಿದ ಖಾಸಗಿ ಸಂಸ್ಥೆಯವರು ಸರಕಾರ ನಿಗದಿ ಮಾಡುವ ಮುನ್ನವೇ ಮನಸೋ ಇಚ್ಛೆ ದರ ವಸೂಲಿ ಮಾಡುತ್ತಿದ್ದಾರೆ ಜಿಲ್ಲೆಯಲ್ಲಿ ಖಾಸಗಿ ಕಂಪನಿಗಳು ಸ್ಟಿಕ್ಕರ್ ಹಾಕಿದ ಬಳಿಕ ಅವರು ನೀಡಿದ ಸರ್ಟಿಫಿಕೇಟ್ ಇದ್ದಲ್ಲಿ ಸಾರಿಗೆ ಇಲಾಖೆ ಫಿಟ್ ನೆಸ್ ಸರ್ಟಿಫಿಕೇಟ್ ನೀಡುತ್ತಿವೆ. ನಾಲ್ಕು ಚಕ್ರಗಳ ವಾಣಿಜ್ಯ ವಾಹನಕ್ಕೆ ಸಾವಿರಕ್ಕೂ ಅಧಿಕವಾದರೆ, 6 ಚಕ್ರಗಳ ಲಾರಿಗೆ 4 ಸಾವಿರಕ್ಕೂ ಅಧಿಕ ದರವಾಗುತ್ತದೆ ಎಂದು ಈ ಸಂದರ್ಭ ಸಂತ್ರಸ್ತರು ದೂರಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…