ಬಂಟ್ವಾಳ

ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಕೆ.ಬಾಲಕೃಷ್ಣ ಗಟ್ಟಿ ಆಯ್ಕೆ

ಬಂಟ್ವಾಳ: ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 12 ಮತ್ತು 13ರಂದು ನಡೆಯಲಿರುವ 22ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೆ. ಬಾಲಕೃಷ್ಣ ಗಟ್ಟಿ ಆಯ್ಕೆಯಾಗಿದ್ದಾರೆ.

ಬಂಟ್ವಾಳದ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಅ.17ರ ಸೋಮವಾರ ನಡೆದ ಪತ್ರಕರ್ತರೊಂದಿಗಿನ ಮಾತುಕತೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಅವರು ಆಯ್ಕೆಯನ್ನು ಪ್ರಕಟಿಸಿದರು.

ಕಸಾಪ ಹಲವು ಸಮಾಜಮುಖಿ ಕಾರ್ಯಯೋಜನೆಯನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು, ಬೆಳಕಿಗೆ ಬಾರದ ಪ್ರತಿಭೆಗಳನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದ ಅವರು, ಬಂಟ್ವಾಳ ತಾಲೂಕಿನಲ್ಲಿ ದಿನಪತ್ರಿಕೆಯೊಂದನ್ನು ಸ್ಥಾಪಿಸಿ, ಸ್ಥಳೀಯ ಹಲವು ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾದ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಮಾಧ್ಯಮರಂಗದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ.ಗಟ್ಟಿಯವರನ್ನು ಈ ಬಾರಿ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಮಾಧ್ಯಮ ಕ್ಷೇತ್ರಕ್ಕೆ ಕಸಾಪ ನೀಡುವ ಗೌರವವೂ ಹೌದು ಎಂದರು.

ಈ ಸಂದರ್ಭ ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ಅಮ್ಮುಂಜೆಯಲ್ಲಿ ನಡೆಯಲಿರುವ ಸಮ್ಮೇಳನದ ವಿವರಗಳನ್ನು ನೀಡಿದರು. ಕಸಾಪ ಗೌರವ ಪ್ರಧಾನ ಕಾರ್ಯದರ್ಶಿ ವಿ.ಸು.ಭಟ್, ರಮಾನಂದ ನೂಜಿಪ್ಪಾಡಿ, ಕೋಶಾಧಿಕಾರಿ ಡಿ.ಬಿ.ಅಬ್ದುಲ್ ರಹಮಾನ್, ಪದಾಧಿಕಾರಿಗಳಾದ ಗಣೇಶ ಪ್ರಸಾದ ಪಾಂಡೇಲು, ಚೇತನ್ ಮುಂಡಾಜೆ, ಗೋಪಾಲ ಅಂಚನ್, ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ,  ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಅಬುಬಕರ್ ಅಮ್ಮುಂಜೆ,  ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುಂಜೆ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಮೌನೇಶ ವಿಶ್ವಕರ್ಮ ಸಹಿತ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.

ಪ್ರೊ.ಬಾಲಕೃಷ್ಣ ಗಟ್ಟಿ: 79ರ ಹರೆಯದ ಪ್ರೊ.ಗಟ್ಟಿ, ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ. ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಕರ್ತವ್ಯ ಸಲ್ಲಿಸಿದ್ದು, ಮಂಗಳೂರು ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಪತ್ರಕರ್ತರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಪ್ರೊ. ಗಟ್ಟಿ ಅವರು, 1996ರಲ್ಲಿ ಬಂಟ್ವಾಳದಲ್ಲಿ ನೇತ್ರಾವತಿ ವಾರ್ತೆ ಎಂಬ ಪತ್ರಿಕೆ ಹೊರಡಿಸಿ, ಅದರ ಸಂಪಾದಕರಾಗಿ ಸ್ಥಳೀಯ ಹಲವು ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದವರು. 1980ರಿಂದ 1998ರವರೆಗೆ ಬಂಟ್ವಾಳ ತಾಲೂಕು ವರದಿಗಾರರಾಗಿ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಸೇವೆ ಸಲ್ಲಿಸಿದ್ದಾರೆ. 1998ರಿಂದ 2003ರವರೆಗೆ ಜನವಾಹಿನಿ ಕನ್ನಡ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಅವರು, ತಾಲೂಕು ಉಚಿತ ಕಾನೂನು ನೆರವು ಸಮಿತಿ ಸದಸ್ಯರಾಗಿದ್ದರು. ಬಂಟ್ವಾಳ ತಾಲೂಕಿನಲ್ಲಿ ಪತ್ರಕರ್ತರ ಸಂಘದ ಸ್ಥಾಪನೆಗೆ ಕಾರಣಕರ್ತರಲ್ಲೊಬ್ಬರಾಗಿದ್ದ ಪ್ರೊ. ಗಟ್ಟಿ, ಅವರು ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸ್ವರ್ಣರಥದ ವಿಶೇಷ ಸಂಚಿಕೆಯ ಸಂಪಾದಕರಾಗಿದ್ದ ಡಾ. ಗಟ್ಟಿ ಸೃಜನಶೀಲ ಪ್ರತಿಭೆಗಳಿಗೆ ಪ್ರೋತ್ಸಾಹಕರಾಗಿದ್ದವರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts