ಬಂಟ್ವಾಳ: ರಾಜ್ಯ ಸರಕಾರವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯತ್ನವನ್ನು ನಡೆಸುತ್ತಿದ್ದು, ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ. ಈ ಮೂಲಕ ನೇರವಾಗಿ ಅಧಿಕಾರಿಗಳ ಮೂಲಕ ಪಂಚಾಯಿತಿ ಆಡಳಿತ ನಡೆಸಲು ಹೊರಟಿದೆ ಎಂದು ಆರೋಪಿಸಿರುವ ರಾಜೀವ ಗಾಂಧಿ ಪಂಚಾಯತ್ ರಾಜ್ ಪ್ರತಿನಿಧಿಗಳ ಸಂಘದ ಜಿಲ್ಲಾಧ್ಯಕ್ಷ ಕೊಳ್ನಾಡು ಸುಭಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದನ್ನು ಖಂಡಿಸಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಮುಂಭಾಗ ಅಕ್ಟೋಬರ್ 18ರಂದು ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಸರಕಾರಿ ಸಿಬ್ಬಂದಿಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು ಅಧಿಕಾರ ವಿಕೇಂದ್ರೀಕರಣದ ವಿರುದ್ಧವಾಗಿ ಬಿಜೆಪಿ ವರ್ತಿಸುತ್ತಿದೆ ಎಂದು ದೂರಿದರು.
ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ತಾಪಂ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬ್ಲಾಕ್ ಪಂಚಾಯತ್ ರಾಜ್ ಪ್ರತಿನಿಧಿಗಳ ಒಕ್ಕೂಟ ಅಧ್ಯಕ್ಷ ಸಂದೇಶ್ ಶೆಟ್ಟಿ, ಪ್ರಮುಖರಾದ ಜಗದೀಶ ಕೊಯ್ಲ ಉಪಸ್ಥಿತರಿದ್ದರು.