ಬಂಟ್ವಾಳ: ನಮ್ಮ ಆಂತರ್ಯದಲ್ಲಿ ಇರುವ ರಾಕ್ಷಸತ್ವವನ್ನು ಮಟ್ಟ ಹಾಕಲು ನವರಾತ್ರಿ ಉತ್ಸವ ಸಂದರ್ಭ ದೇವಿಯ ಆರಾಧನೆ ಪೂರಕವಾಗುತ್ತದೆ, ಆನಂದ ಮತ್ತು ಸಂತೋಷ ಮನುಷ್ಯನಿಗಿರುವ ಎರಡು ಕಣ್ಣುಗಳು ಇವನ್ನು ಅನುಭವಿಸಲು ಆಧ್ಯಾತ್ಮ ಭಾವ ನಮಗೆ ಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಒಡಿಯೂರಿನಲ್ಲಿ ಶುಕ್ರವಾರ ಶ್ರೀ ಸಂಸ್ಥಾನದಲ್ಲಿ ಶ್ರೀ ಲಲಿತಾಪಂಚಮಿ ಮಹೋತ್ಸವ-ಶ್ರೀ ಚಂಡಿಕಾ ಯಾಗ ಕಾರ್ಯಕ್ರಮ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದಿದ್ದು, ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಇಂದು ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ಸ್ವಾಗತಿಸಿ, ಅಭಿನಂದಿಸಬೇಕು, ನಮಗೆ ದೇಶಪ್ರೇಮ ಬೆಳೆಸುವ ವಿದ್ಯೆ ಅಗತ್ಯವಾಗಿದೆ, ಅಧರ್ಮವನ್ನು ಮೆಟ್ಟಿ ನಿಲ್ಲುವ ತಾಯಿಯನ್ನು ನಾವು ನವರಾತ್ರಿಯಂದು ಪೂಜಿಸುತ್ತೇವೆ ಎಂದು ಶ್ರೀಗಳು ತಿಳಿಸಿದರು.
ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಎಸ್. ಕಂಬಳಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ರೈ, ಎ.ಪಿ.ಎಂ.ಸಿ. ಪುತ್ತೂರು ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಸಾಹಿತಿ, ಯಕ್ಷಗಾನ ಅರ್ಥದಾರಿಗಳಾದ ಡಾ. ಕೆ. ರಮಾನಂದ ಬನಾರಿ, ಸೇರಾಜೆ ಸೀತಾರಾಮ ಭಟ್, ಕಲಾವಿದ ಮತ್ತು ಯಕ್ಷಗಾನ ಗುರು ರವಿ ಅಲೆವೂರಾಯ ವರ್ಕಾಡಿ, ಯೋಗಗುರು ಕೆ. ಆನಂದ ಶೆಟ್ಟಿ ಅಳಿಕೆ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಗ್ರಾಮ, ಕಾಸರಗೋಡು ಅಧ್ಯಕ್ಷ ಶಿವರಾಮ ಕಾಸರಗೋಡು, ಯಕ್ಷಗಾನ ಗುರು, ಭಾಗವತ ಶೇಖರ ಶೆಟ್ಟಿ ಬಾಯಾರು ಅವರಿಗೆ ಒಡಿಯೂರು ಕಲಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಒಂಭತ್ತು ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು. ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಸೇರಾಜೆ ಗಣಪತಿ ಭಟ್ ಸ್ವಾಗತಿಸಿದರು. ಒಡಿಯೂರು ಸಂತೋಷ ಭಂಡಾರಿ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗ್ಗೆ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ಚಂಡಿಕಾ ಯಾಗ ನಡೆಯಿತು .ಮಧ್ಯಾಹ್ನ ಶ್ರೀ ಚಂಡಿಕಾ ಯಾಗದ ಪೂರ್ಣಾಹುತಿ, ಶ್ರೀ ವಜ್ರಮಾತೆಗೆ ಕಲ್ಪೋಕ್ತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಹಾಸಂತರ್ಪಣೆ ನಡೆಯಿತು. ಅಪರಾಹ್ನ ಯಕ್ಷಪ್ರತಿಭೆ (ರಿ.), ಮಂಗಳೂರು ಇವರಿಂದ ‘ಬೇಡರ ಕಣ್ಣಪ್ಪ’ ಯಕ್ಷಗಾನ ಬಯಲಾಟ, ಸಂಜೆ ಸಾಮೂಹಿಕ ಸ್ವಯಂವರ ಪಾರ್ವತೀಪೂಜೆ, ಅಷ್ಟಾವಧಾನ ಸೇವೆ, ರಂಗಪೂಜೆ, ಭದ್ರಕಾಳಿಗೆ ವಿಶೇಷಪೂಜೆ ನಡೆಯಿತು.