ಚಿತ್ರ – ಬರೆಹ: ಸಂತೋಷ್ ಕುಲಾಲ್ ನೆತ್ತರಕೆರೆ
ತನ್ನ ಮನೆಯ ಇಡೀ ಆವರಣವನ್ನೇ ಕೃಷಿ ಚಟುವಟಿಕೆಗಳ ಪ್ರಯೋಗ ಶಾಲೆಯನ್ನಾಗಿ ಮಾಡಿ ಮನೆಯ ಅಂಗಳವನ್ನೇ ಭತ್ತದ ಗದ್ದೆಯಾಗಿ ಪರಿವರ್ತಿಸಿದವರು ರಘುನಾಥ್ ಸಪಲ್ಯ ಹೊಳ್ಳರಬೈಲು.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಹೊಳ್ಳರ ಬೈಲ್ ನ ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ರಘುನಾಥ್ ತನ್ನ ಹತ್ತನೇ ತರಗತಿ ವ್ಯಾಸಂಗದ ನಂತರ ತಂದೆ ಪ್ರಗತಿಪರ ಕೃಷಿಕ ದಿ.ಉಗ್ಗಪ್ಪ ಸಪಲ್ಯರೊಂದಿಗೆ ಕೃಷಿ ಕಾರ್ಯಕ್ಕೆ ತೊಡಗಿದವರು.
ಕೃಷಿಯನ್ನೇ ವೃತ್ತಿಯಾಗಿ ಸ್ವೀಕರಿಸಿದ ಇವರು ತನ್ನ ಮನೆಯ ಆವರಣದಲ್ಲಿ ಹೊಸ ವಿಧಾನದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಯ ಅಂಗಳದಲ್ಲಿ ಸುಮಾರು 30 ಸೆಂಟ್ಸ್ ಜಮೀನಿನಲ್ಲಿ ಭತ್ತದ ಬೇಸಾಯ ಮಾಡಿ 1 ಕ್ವಿಂಟಲ್ ಅಕ್ಕಿ ಫಸಲು ಬಂದಿದೆ. ಗದ್ದೆಯ ಬದು(ಹುಣಿ)ವಿನ ಜಾಗವನ್ನು ಕೊಡ ಸದ್ಭಳಕೆ ಮಾಡಿ ಉದ್ದಕ್ಕೆ ಅಲಸಂಡೆ ಗಿಡವನ್ನು ನೆಟ್ಟು ಆಧುನಿಕ ಕೃಷಿ ಪದ್ದತಿಯ ಮೂಲಕ ಫಸಲು ತೆಗೆಯುತ್ತಾರೆ. ಮನೆಯ ಹಿತ್ತಲಿನಲ್ಲಿ ಬಿರಿಯಾನಿ ಅಕ್ಕಿಯ ಪೈರನ್ನು ಬೆಳೆಸಿದ್ದಾರೆ.
ಸಾವಯವ ಕೃಷಿಗೆ ಒತ್ತು ನೀಡುವ ಇವರು ತನ್ನ ಮನೆಯ ಸುತ್ತ ಮುತ್ತಲಿನಲ್ಲಿ ಹಲವಾರು ಹಣ್ಣು ಹಂಪಲುಗಳ ಗಿಡವನ್ನು ನೆಟ್ಟಿದ್ದು ಸುಮಾರು 50 ನಿಂಬೆ ಹಣ್ಣಿನ ಗಿಡ,ಡ್ರಾಗನ್ ಫ್ರೂಟ್ಸ್, ಮ್ಯಾಂಗೋ ಸ್ಟಿನ್,ಲಿಚಿ ಹಣ್ಣು,ಲಕ್ಷ್ಮೀ ಫಲ, ಜಂಬೂ ನೇರಳೆ, ಪಪ್ಪಾಯಿ, ಅಂಬಟೆ ಹೀಗೆ ಸಾಲು ಸಾಲು ಪೌಷ್ಟಿಕಾಂಶಯುಕ್ತ ಗಿಡಗಳು ರಾರಾಜಿಸುತ್ತಿವೆ. ಹೈಬ್ರಿಡ್ ತಳಿಯ ತೆಂಗು, ಕಂಗು ಗಿಡಗಳನ್ನು ಬೆಳೆಸಿದ್ದಾರೆ.
ಅಷ್ಟೇ ಅಲ್ಲದೆ ಹಡಿಲು ಬಿದ್ದ ಗದ್ದೆಯನ್ನು ಕೂಡ ಸಾವಯವ ಗೊಬ್ಬರ ಬಳಸಿ ಫಲವತ್ತ ಗೊಳಿಸಿ, ಒಂದುವರೆ ಎಕರೆಯಷ್ಟು ಜಮೀನಿನಲ್ಲಿ ಉಳುಮೆ ಮಾಡಿ ಭತ್ತದ ಬೇಸಾಯ ಮಾಡಿ ಪ್ರತಿವರ್ಷ ಸುಮಾರು 25 ಮುಡಿ ಅಕ್ಕಿಯ ಇಳುವರಿ ತೆಗೆಯುತ್ತಿದ್ದಾರೆ.
ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರಘುನಾಥ್ ಸಪಲ್ಯರು ಯಾವುದೇ ಬೆಳೆಯು ನಷ್ಟದ ಬೆಳೆ ಅಲ್ಲ, ಬೆಳೆಯ ಪೂರ್ವಾಪರವನ್ನು ಅರಿತುಕೊಳ್ಳಬೇಕು. ರಾಸಾಯನಿಕ ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಮಲಿನಯುಕ್ತ ಪರಿಸರ,ಎಲ್ಲೆಲ್ಲೂ ಅನಾರೋಗ್ಯ ಕಂಡು ಬರುವುದರಿಂದ ಮುಂದಿನ ತಲೆಮಾರು ಸಾವಯವ ಕೃಷಿ ಪದ್ಧತಿಗೆ ಒತ್ತು ಕೊಡಬೇಕು ಕೃಷಿ ಚಟುವಟಿಕೆಗಳಿಂದ ಉತ್ತಮ ಆದಾಯದೊಂದಿಗೆ ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ಸಿಗುತ್ತದೆ ಎನ್ನುತ್ತಾರೆ .
ಒಟ್ಟಿನಲ್ಲಿ ಕೃಷಿಯಲ್ಲಿಯೇ ಖುಷಿ ಕಾಣುವ ಇವರು, ಜಮೀನನ್ನು ಸದ್ಭಳಕೆ ಮಾಡಿ ನೈಸರ್ಗಿಕ ಗೊಬ್ಬರಗಳ ಮೂಲಕ ಕೃಷಿ ಚಟುವಟಿಕೆ ಮಾಡಿ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ.