ಎಸೆಯಬೇಕಾಗಿದ್ದ ಬೆಂಚು, ಡೆಸ್ಕುಗಳಿಗೆ ಹಳೆ ವಿದ್ಯಾರ್ಥಿ ಕೊಟ್ಟರು ನವರೂಪ
ರಮೇಶ ಆಚಾರ್ಯ (52) ಅವರು ಮೂಡಂಬೈಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ರ ದಶಕದಲ್ಲಿ ಒಂದನೇ ಕ್ಲಾಸಿನಿಂದ ಏಳನೇ ತರಗತಿವರೆಗೆ ವ್ಯಾಸಂಗ ಮಾಡಿದ ಹಿನ್ನೆಲೆಯಲ್ಲಿ ಆ ಶಾಲೆಯ ಹಿರಿಯ ವಿದ್ಯಾರ್ಥಿ. ರಮೇಶ್ ಆಚಾರ್ಯರು ಸುಂದರವಾದ ಪೀಠೋಪಕರಣಗಳನ್ನು ಮರುಬಳಕೆ ಮಾಡಿಕೊಟ್ಟಿದ್ದಾರೆ. ಅವುಗಳಲ್ಲೂ ಆಕರ್ಷಕ ವಿನ್ಯಾಸದ ಪುಸ್ತಕದ ಶೆಲ್ಫ್ ಎಲ್ಲರ ಗಮನ ಸೆಳೆಯುತ್ತಿದೆ.
ಮೂಡಂಬೈಲು ಸರ್ಕಾರಿ ಶಾಲೆಯಲ್ಲಿರುವ 60 ವಿದ್ಯಾರ್ಥಿಗಳಿಗೆ ಹೊಸ ಬೆಂಚು ಡೆಸ್ಕುಗಳು ಬಂದಿವೆ. ಹಳೆಯದ್ದು ಕುಳಿತುಕೊಳ್ಳಲು ಹಾಗೂ ಬರೆಯುವ ಪುಸ್ತಕಗಳನ್ನು ಇಡಲು ಅಸಾಧ್ಯವಾದ ಪರಿಸ್ಥಿತಿಯಲ್ಲಿದ್ದವು. ಇನ್ನು ಮತ್ತೆ ಅವುಗಳನ್ನು ಬೆಂಚು, ಡೆಸ್ಕುಗಳನ್ನಾಗಿ ಮಾರ್ಪಾಡು ಮಾಡಲು ಅಸಾಧ್ಯ ಎಂದಾದಾಗ, ಮುಖ್ಯೋಪಾಧ್ಯಾಯ ಅರವಿಂದ ಕುಡ್ಲ ಅವರು ರಮೇಶ್ ಆಚಾರ್ಯ ಅವರನ್ನು ಸಂಪರ್ಕಿಸಿದರು. ಇದೀಗ ನುರಿತ ಮರಕೆಲಸಗಾರರೂ ಆಗಿರುವ ರಮೇಶ್ ಅವರಿಗೆ ಪೇಪರ್ ಓದುವ ಸಾಧನ, ಪುಸ್ತಕ ಶೆಲ್ಫ್, ಅಡುಗೆ ಕೋಣೆಯ ಶೆಲ್ಫ್ ಮಾಡಲು ಪರಿತ್ಯಕ್ತ ಬೆಂಚು ಡೆಸ್ಕುಗಳನ್ನು ಬಳಸಿದ್ದಾರೆ. ವಿಪ್ರೋ ಅರ್ಥಿಯನ್ ಸಸ್ಟೈನಬಿಲಿಟಿ ಡೆವಲಪ್‌ಮೆಂಟ್ ಯೋಜನೆಗೆ ದೇಶದ 40 ಶಾಲೆಗಳು ಆಯ್ಕೆಯಾಗಿದ್ದು, ಇವುಗಳಲ್ಲಿ ಮೂಡಂಬೈಲು ಶಾಲೆಯೂ ಒಂದು. ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಗೆ ಒಡ್ಡಿಕೊಳ್ಳುವುದು ಹಳೆಯ ಪೀಠೋಪಕರಣಗಳನ್ನು ಮರು-ಸೈಕ್ಲಿಂಗ್ ಮಾಡುವ ಬಗ್ಗೆ ಯೋಚಿಸುವಂತೆ ಮಾಡಿದೆ ಎಂದು ಅರವಿಂದ ಕುಡ್ಲ (ARAVINDA KUDLA) ಹೇಳಿದ್ದಾರೆ.