ಚಿತ್ರ – ವರದಿ: ಯಾದವ್ ಕುಲಾಲ್, ಅಗ್ರಬೈಲ್
ಹೆದ್ದಾರಿ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಸಾಮಾನ್ಯವಾಗಿ ಕಳೆಗಿಡಗಳು ಕಾಣಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಜಾಗದಲ್ಲಿ ತರಕಾರಿ ನಳನಳಿಸುತ್ತಿವೆ. ಇದು ಬಿ.ಸಿ.ರೋಡ್ ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಬಡಗುಂಡಿ ಎಂಬಲ್ಲಿ ಕಂಡುಬರುವ ದೃಶ್ಯ.
ಬಂಟ್ವಾಳ, ಮಣಿಹಳ್ಳ ದಾಟಿದ ನಂತರ ಬಡಗುಂಡಿ ಮತ್ತು ವಗ್ಗ ಮಧ್ಯ ಭಾಗದಲ್ಲಿ ಸಾಲು ಸಾಲು ತರಕಾರಿ ಸಸಿಗಳು ಗಮನ ಸೆಳೆಯುತ್ತದೆ. ಕೃಷಿಕರೊಬ್ಬರು ತರಕಾರಿ ಬೆಳೆಸಲು ಆಯ್ದುಕೊಂಡದ್ದು ಹೆದ್ದಾರಿ ರಸ್ತೆಯ ಬದಿ ಖಾಲಿ ಇರುವ ಪ್ರದೇಶ.
ಬಡಗುಂಡಿ ನಿವಾಸಿ ರಾಮಣ್ಣ ಸಪಲ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತರಬೇತಿ ಪಡೆದು ಬೆಂಡೆ, ಅಲಸಂಡೆ, ಹೀರೆಕಾಯಿ, ತೊಂಡೆ, ಸೋರೆ, ಬೂದು ಕುಂಬಳ ತರಕಾರಿ ಕೃಷಿ ಮಾಡಿದ್ದಾರೆ. ರಸ್ತೆ ಅಗಲೀಕರಣಕ್ಕೆ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದರೂ ತರಕಾರಿ ಬೆಳೆಸುವ ಉತ್ಸಾಹ ನಿಲ್ಲಿಸದೆ ಹೆದ್ದಾರಿ ರಸ್ತೆಯ ಒಂದು ಬದಿಯಲ್ಲಿ ಸುಮಾರು ಎರಡು ಕಿಲೋ ಮೀಟರ್ ಉದ್ದದಲ್ಲಿ ತರಕಾರಿ ಬೆಳೆಸಿದ್ದಾರೆ.
ಕಳೆದುಕೊಳ್ಳದೆ ಗೋಣಿ ಚೀಲದಲ್ಲಿ ಸಾವಯವ ಗೊಬ್ಬರ ಬಳಸಿ ಸಾಲು ಸಾಲು ಬೆಂಡೆ ಮತ್ತು ಅಲಸಂಡೆ ಗಿಡ ಬೆಳೆಸಿದ್ದಾರೆ. ಕೇವಲ ಹಟ್ಟಿಗೊಬ್ಬರ ಮತ್ತು ಹನಿ ನೀರಾವರಿ ಮೂಲಕ 150ಕ್ಕೂ ಮಿಕ್ಕಿ ಬೆಂಡೆ ಗಿಡ, 250ಕ್ಕೂ ಮಿಕ್ಕಿ ಅಲಸಂಡೆ ಗಿಡ ಬೆಳೆದಿದ್ದು, ರಸ್ತೆ ಬದಿ ಬೇಲಿಗೆ ಅಲಸಂಡೆ ಬಳ್ಳಿ ಹಬ್ಬಿದೆ. ಉಳಿದಂತೆ ಮನೆ ಹಿಂಬದಿ ಬೇಲಿಯಲ್ಲಿ ಅಲಸಂಡೆ ಮಾತ್ರವಲ್ಲದೆ ಹೀರೆಕಾಯಿ, ತೊಂಡೆ, ಸೋರೆ ಕಾಯಿ ಮತ್ತು ಬೂದುಕುಂಬಳ ಬಳ್ಳಿ ಬೆಳೆಸಿದ್ದಾರೆ. ರಸ್ತೆಯ ಬದಿಯಲ್ಲಿ ಸಾಲು ಸಾಲು ತರಕಾರಿಗಳಿಂದ ಪ್ರಾಣಿ ಪಕ್ಷಿಗಳಿಗೆ ತುಂಬಾ ಖುಷಿ. ಯಾಕೆಂದರೆ ಇಲ್ಲಿಂದ ನಿರಾಯಾಸವಾಗಿ ಮಂಗಗಳು, ನವಿಲುಗಳು ಇಲ್ಲಿ ಬೆಳೆದ ತರಕಾರಿಗಳನ್ನು ತಿಂದು ಹೋಗುತ್ತದೆ. ಆದರೆ ರಸ್ತೆ ಬದಿಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ.
ತಾವು ಬೆಳೆಸಿದ ತರಕಾರಿಗಳನ್ನು ಸ್ವಂತಕ್ಕೂ ಮಾತ್ರವಲ್ಲದೆ ಹತ್ತಿರದ ಅಂಗನವಾಡಿ ಶಾಲೆ, ಪ್ರಾಥಮಿಕ ಶಾಲೆಯ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಹಾಗೂ ಅಕ್ಷರ ದಾಸೋಹಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ.
ಕೃಷಿಯ ಬಗ್ಗೆ ಆಸಕ್ತಿ ಹೊಂದಿದ್ದ ನನಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಂಟ್ವಾಳ ತೋಟಗಾರಿಕೆ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ದೊರೆತ ಕಾರಣ ನಾನು ತರಕಾರಿ ಬೆಳೆಸಲು ಆರಂಭಿಸಿದೆ. ತರಕಾರಿ ಬೆಳೆಸಲು ವಿಶಾಲವಾದ ಜಾಗವೇ ಇರಬೇಕೆಂದೇನಿಲ್ಲ. ಮನೆ ಅಂಗಳ ಸಹಿತ ಬೇಲಿ ಅಥವಾ ಇಂತಹ ರಸ್ತೆ ಬದಿ ಕೂಡಾ ಗೋಣಿ ಚೀಲದಲ್ಲಿ ತರಕಾರಿ ಬೆಳೆಯಬಹುದು ಎನ್ನುತ್ತಾರೆ ರಾಮಣ್ಣ ನಾವೂರು