ಬಂಟ್ವಾಳ: ಬಿ.ಸಿ.ರೋಡ್ ನ ಹೃದಯ ಭಾಗವಾದ ಬಸ್ ನಿಲ್ದಾಣದ ಹಿಂಬದಿ ಆಂಬುಲೆನ್ಸ್ ಕೂಡ ಪ್ರವೇಶಿಸಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಕಾರಣ, ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನಗಳು. ಬೆಳಗ್ಗೆಯೇ ಪಾರ್ಕಿಂಗ್ ಮಾಡಿ ಹೋಗುವವರು ಬಂದು ತೆಗೆದುಕೊಂಡು ಹೋಗುವುದು ಸಂಜೆ ಅಥವಾ ರಾತ್ರಿ!!
ಸ್ಥಳೀಯ ನಿವಾಸಿಗಳು ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಈ ಕುರಿತು ಅವರು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ, ಅಧ್ಯಕ್ಷರು, ತಹಸೀಲ್ದಾರ್, ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದು, ಈ ಜಾಗವನ್ನು ನೋ ಪಾರ್ಕಿಂಗ್ ಝೋನ್ ಆಗಿ ಪರಿವರ್ತಿಸಲು ವಿನಂತಿಸಿದ್ದಾರೆ.
ಬಿ.ಸಿ.ರೋಡ್ ನ ಖಾಸಗಿ ಬಸ್ ನಿಲ್ದಾಣದ ಹಿಂಬದಿ ಸುಮಾರು 300ಕ್ಕೂ ಅಧಿಕ ಮನೆಗಳಿದ್ದು, ಈ ಮನೆಗಳಿಗೆ ಹೋಗಿ ಬರಲು ಹೋಟೆಲ್ ಕೃಷ್ಣಿಮಾದಿಂದ ಎರಡು ರಸ್ತೆಗಳಿವೆ. ಇಲ್ಲಿ ಪ್ರತಿನಿತ್ಯ ಅಪರಿಚಿತರು ವಾಹನಗಳನ್ನು ನಿಲ್ಲಿಸಿ ಇಡೀ ಪೇಟೆ ಸುತ್ತಾಡಲು ಹೋದರೆ ಪರದಾಟ ಆರಂಭ. ಕೆಲವರು ಬೆಳಗ್ಗೆ ವಾಹನ ನಿಲ್ಲಿಸಿ ಮಂಗಳೂರಿಗೆ ಹೊರಟರೆ, ರಾತ್ರಿ ಬಂದು ತೆಗೆದುಕೊಂಡು ಹೋಗುವುದುಂಟು. ಬಸ್ ನಿಲ್ದಾಣದ ಹಿಂದಿನ ವಠಾರದಲ್ಲಿ ಅನೇಕ ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಇದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಂದರ್ಭ ಆಂಬುಲೆನ್ಸ್ ಅನ್ನು ಕರೆಸಲಾಗಿತ್ತು. ಆದರೆ ಅದು ಹೋಗಲು ಜಾಗವಿಲ್ಲದ ಕಾರಣ ಅವರನ್ನು ಹೊತ್ತುಕೊಂಡು ಕೃಷ್ಣಿಮಾ ಹೋಟೆಲ್ ಮುಂಭಾಗದವರೆಗೂ ಬರಬೇಕಾಯಿತು. ಇಂಥ ಸನ್ನಿವೇಶಗಳು ಆಗಾಗ ಆಗುತ್ತಲೇ ಇರುತ್ತವೆ. ಸ್ಥಳೀಯ ಮಹಾಕಾಳಿಬೆಟ್ಟು ಬಡಾವಣೆಗೆ ಹೋಗಿ ಬರುವ ರಸ್ತೆಗಳಲ್ಲಿ ಅನಧಿಕೃತ ಪಾರ್ಕಿಂಗ್ ಮಾಡುವುದುದನ್ನು ತಡೆಯಬೇಕು, ನೋ ಪಾರ್ಕಿಂಗ್ ವಲಯವನ್ನಾಗಿ ರೂಪಿಸಬೇಕು. ರಸ್ತೆಗೆ ಡಾಂಬರು ಅಥವಾ ಕಾಂಕ್ರೀಟ್ ಹಾಕುವುದು ಹಾಗೂ ಸೂಕ್ತ ಚರಂಡಿ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಸ್ಥಳೀಯರು ಇರಿಸಿದ್ದಾರೆ.