ಪ್ರಸ್ತುತ ಪೊಳಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಧಾಕೃಷ್ಣ ಭಟ್ ಕೆ ಅವರಿಗೆ ಬಂಟ್ವಾಳ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಪೊಳಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮುಖ್ಯ ಶಿಕ್ಷಕರಾಗಿರುವ ಅವರು ಹೈಸ್ಕೂಲಿನ ಬೆಳವಣಿಗೆಗೆ ಕಾರಣರಾದವರು.
ಸ್ಕೌಟಿಂಗ್ ನಲ್ಲಿ ಅಸಿಸ್ಟೆಂಟ್ ಲೀಡರ್ ಟ್ರೈನರ್ ಆಗಿ, ರೋಟರಿ ಗ್ರಾಮೀಣ ದಳದ ಕಾರ್ಯದರ್ಶಿಯಾಗಿ, ಚಿಣ್ಣರ ಅಂಗಳ, ನಲಿಕಲಿ, ಕ್ರಿಯಾ ಸಂಶೋಧನೆ, ಗಣಿತ ವಿಷಯಗಳಲ್ಲಿ ತಾಲೂಕು, ಜಿಲ್ಲಾ ಮಟ್ಟದ ತರಬೇತುದಾರನಾಗಿ, ಗಣಿತ ವಿಷಯ ಪರಿವೀಕ್ಷಕರಾಗಿ ಜಿಲ್ಲೆಯಲ್ಲಿ ಗಣಿತ ವಿಜ್ಞಾನ ಶಿಕ್ಷಕರ ವೇದಿಕೆ ನಿರ್ಮಿಸುವ ಮೂಲಕ ಅಂತರ್ಜಾಲ ಮೂಲಕ ಶಿಕ್ಷಕರಿಗೆ ಜ್ಞಾನ ಹಂಚುವ ಪರಿಕಲ್ಪನೆಯನ್ನು ಮಾಡಿ ಗಮನ ಸೆಳೆದಿದ್ಧಾರೆ. 1963ರಲ್ಲಿ ಬಂಟ್ವಾಳ ತಾಲೂಕಿನ ಮಾಣಿಲದಲ್ಲಿ ಕೃಷ್ಣ ಭಟ್, ಸರಸ್ವತಿ ಅಮ್ಮ ಅವರ ಪುತ್ರನಾಗಿ ಜನಿಸಿದ ಅವರು, ಪಕಳಕುಂಜ, ಅಡ್ಯನಡ್ಕಗಳಲ್ಲಿ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸ ಮುಗಿಸಿ, ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ, ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಹಾಗೂ ಮಂಗಳೂರಿನಲ್ಲಿ ಬಿಎಡ್ ಪೂರೈಸಿ, 1985ರಲ್ಲಿ ಸರ್ಕಾರಿ ಪ್ರೌಢಶಾಲೆ, ಮಂಚಿಯಲ್ಲಿ ಸಹಶಿಕ್ಷಕರಾಗಿ ಉದ್ಯೋಗ ಆರಂಭಿಸಿದರು. ಬಳಿಕ ಸರ್ಕಾರಿ ಪದವಿಪೂರ್ವ ಕಾಲೇಜು ಸಜಿಪಮೂಡ, ಸರ್ಕಾರಿ ಪ್ರೌಢಶಾಲೆ ಶಂಭೂರುಗಳಲ್ಲಿ ಕರ್ತವ್ಯ ಸಲ್ಲಿಸಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅತ್ತಾವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ಸಲ್ಲಿಸಿ, ಮಂಗಳೂರಿನ ಉಪನಿರ್ದೇಶಕರ ಕಚೇರಿಯಲ್ಲಿ ಗಣಿತ ವಿಷಯ ಪರಿವೀಕ್ಷಣಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ ಭಟ್, ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಹೆಚ್ಚುವರಿ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿಯಾಗಿದ್ದರು. ಇದೀಗ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.