ಬಂಟ್ವಾಳ: ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಲ ಕಸುಬು ಆಧಾರಿತ ಗುಡಿ ಕೈಗಾರಿಕೆಗೆ ವಿಫುಲ ಅವಕಾಶ ಇದ್ದು ಗುಡಿ ಕೈಗಾರಿಕೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಕುಲ ಕಸುಬನ್ನು ಉಳಿಸುವ ಕೆಲಸ ನಡೆಯಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದಿಂದ ಬಿ.ಸಿ.ರೋಡ್ ಪೊಸಳ್ಳಿಯಲ್ಲಿರುವ ಕುಲಾಲ ಸಮುದಾಯ ಭವನದ ಮೇಲಂತಸ್ಥಿನ ಕಟ್ಟಡ ಕಾಮಗಾರಿಯ ಶಿಲಾಫಲಕ ಅನಾವರಣ ಮಾಡಿ ಮಾತನಾಡಿದರು. ಉತ್ತಮ ಮಾರುಕಟ್ಟೆ ಸೃಷ್ಟಿಸುವ ಮೂಲಕ ಕುಲ ಕಸುಬನ್ನು ಉಳಿಸಿ ಬೆಳೆಸಬೇಕಾದ ಕೆಲಸ ಇಂದು ಅಗತ್ಯವಾಗಿ ಮಾಡಬೇಕಾಗಿದೆ. ಗುಜರಾತ್, ಉತ್ತರ ಪ್ರದೇಶದಲ್ಲಿ ಕುಲ ಕಸುಬು ಆಧಾರಿತ ಗುಡಿ ಮತ್ತು ಸಣ್ಣ ಕೈಗಾರಿಕೆಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿವೆ. ಇಡೀ ದೇಶಕ್ಕೆ ಅಲ್ಲಿ ವಸ್ತುಗಳು ರಫ್ತು ಆಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಗುಡಿ ಕೈಗಾರಿಕೆ ಅಭಿವೃದ್ಧಿಯಾಗಿ ಹಿಂದುಳಿದ ಸಮುದಾಯ ಬಲಿಷ್ಠವಾಗಬೇಕು ಎಂದು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕುಲಾಲ ಸಮುದಾಯದ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಬಂಟ್ವಾಳ ತಾಲೂಕಿನಲ್ಲಿ. ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿ ಸುಸಜ್ಜಿತ ಮತ್ತು ವಿಸ್ತಾರವಾದ ಸಮುದಾಯ ಭವನದ ನಿರ್ಮಾಣ ಅತ್ಯಗತ್ಯವಾಗಿದೆ. ಇಂತಹ ಮಹತ್ವದ ಕೆಲಸಕ್ಕೆ ಸಮುದಾಯ ಮುಂದಡಿ ಇಟ್ಟಿದ್ದು ಇದಕ್ಕೆ ತನ್ನ ಇತಿಮಿತಿಯಲ್ಲಿ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಊಟ, ಉಡುಗೆಗೆ ಸಂಕಷ್ಟ ಪಡುತ್ತಿದ್ದ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ಬದುಕು ಕಟ್ಟಲು ನೆರವಾದವರು ದೇವರಾಜ ಅರಸು ಅವರು. ಧನಿಕರ, ಬಲಾಢ್ಯರ ಭಾರೀ ವಿರೋಧ ಇದ್ದರೂ ಭೂ ಮಸೂದೆ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಹಿಂದುಳಿದ ವರ್ಗ ಸ್ವಾಭಿಮಾನದ ಬದುಕು ಕಟ್ಟಲು ನೆರವಾದರು. ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ ದುಡಿಯುವವರಿಗೆ ಇಂದು ದೇವರಾಜ ಅರಸು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಅವರು ಹೇಳಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕುಂಭನಿಧಿ ಸಂಚಯಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿ. ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಅವರನ್ನು ಅಭಿನಂದಿಸಲಾಯಿತು. ಸ್ಥಳಧಾನಿಗಳಾದ ಜನಾರ್ದನ ಕುಲಾಲ್ ಸಹೋದರರನ್ನು ಗೌರವಿಸಲಾಯಿತು. ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಡಿ.ಆರ್. ಅವರನ್ನು ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಪುರಸಭೆ ಸದಸ್ಯೆ ಶೋಭಾ ಹರಿಶ್ಚಂದ್ರ, ಕಟ್ಟಡ ಸಮಿತಿ ಗೌರವಾಧ್ಯಕ್ಷ ಕೃಷ್ಣಪ್ಪ ಬಿ., ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಸಂಘದ ಕೋಶಾಧಿಕಾರಿ ಸತೀಶ್ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ಲಿಂಗಪ್ಪ, ಕಟ್ಟಡ ಸಮಿತಿ ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು. ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಲಾಲ್ ಅಗ್ರಬೈಲು ವಂದಿಸಿದರು, ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಮಾಣಿಲ ಶ್ರೀಗಳಿಂದ ಚಾಲನೆ: ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಬೆಳಿಗ್ಗೆ ಗಣಯಾಗದಲ್ಲಿ ಪಾಲ್ಗೊಂಡು ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಶುಭ ಹಾರೈಸಿದರು.