ಬಂಟ್ವಾಳ: ಬ್ರಹ್ಮರಕೂಟ್ಲುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಬಂಟ್ವಾಳ ಬಂಟರ ಸಂಘದ ಬಂಟರ ಭವನದಲ್ಲಿ ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಸಹಕಾರದೊಂದಿಗೆ ಒಟ್ಟು 48 ಲಕ್ಷ ರೂ ಮೊತ್ತದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಭಾನುವಾರ ನಡೆಯಿತು.
ಅಧ್ಯಕ್ಷತೆಯನ್ನು ಬಂಟರ ಸಂಘ ಬಂಟ್ವಾಳ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ವಹಿಸಿ ಮಾತನಾಡಿ, ಇದರ ಸದುಪಯೋಗ ಪಡೆದುಕೊಂಡ ವಿದ್ಯಾರ್ಥಿಗಳು ಮುಂದೆ ಇತರರಿಗೂ ನೆರವಾಗುವಂತಾಗಲಿ ಎಂದು ಶುಭ ಹಾರೈಸಿದರು. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿ ಬಂಟ್ವಾಳ ಬಂಟರ ಸಂಘ ಉತ್ತಮ ಕಾರ್ಯ ನಡೆಸುತ್ತಿದೆ ಎಂದು ಶುಭ ಹಾರೈಸಿದರು.
ಅತಿಥಿಗಳಾಗಿ ಉದ್ಯಮಿ ಹಾಗೂ ಬಂಟವಾಳ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಸಂಘದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಸಿ.ಎಸ್.ಆರ್.ನ ಪ್ರಧಾನ ವ್ಯವಸ್ಥಾಪಕ ಡಾ. ನೀಲರತನ್ ಶೆಂಡೆ ಭಾಗವಹಿಸಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಇದೇ ಸಂದರ್ಭ, ಮುಂಬೈನ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಹಾಗೂ ವಿಧಾನಪರಿಷತ್ತು ಸದಸ್ಯ ಡಾ. ಮಂಜುನಾಥ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.
ವಿಕಲಚೇತನರಿಗೆ ಸಹಾಯಧನ, ಪ್ರತಿಭಾ ಪುರಸ್ಕಾರ, ಸ್ಕಾಲರ್ ಶಿಪ್ ಹಾಗೂ ಇತರ ಸಮಾಜದ ವಿದ್ಯಾರ್ಥಿಗಳಿಗೆ ನೆರವು ಸೇರಿದಂತೆ ಒಟ್ಟು 48 ಲಕ್ಷ ರೂಪಾಯಿಗಳ ಮೊತ್ತದ ನೆರವನ್ನು ನೀಡಲಾಯಿತು.
ಸಂಘದ ಕಾರ್ಯದರ್ಶಿ ಬದಿಗುಡ್ಡೆ ಜಗನ್ನಾಥ ಚೌಟ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕೆ, ಜೊತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರತಿಭಾ ಎ.ರೈ, ಸಂಚಾಲಕ ಎಚ್. ಸಂಕಪ್ಪ ಶೆಟ್ಟಿ, ಮಹಿಳಾ ವಿಭಾಗ ಅಧ್ಯಕ್ಷೆ ರಮಾ ಭಂಡಾರಿ, ಯುವ ವಿಭಾಗ ಅಧ್ಯಕ್ಷ ನಿಶಾನ್ ಆಳ್ವ ಉಪಸ್ಥಿತರಿದ್ದರು. ಸುಮಾರು 891 ಮಕ್ಕಳಿಗೆ ಹಾಗೂ 40 ವಿಕಲಚೇತನರಿಗೆ ಸಹಾಯಧನ, ನೆರವು ನೀಡಲಾಯಿತು. ಕಿಶೋರ್ ಭಂಡಾರಿ ಮತ್ತು ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.