ಬಂಟ್ವಾಳ : ಬಿ.ಸಿ.ರೋಡಿನ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ 43ನೇ ವರ್ಷ ಸಾರ್ವಜನಿಕ ಶ್ರೀ ಗಣೇಶೋತ್ಸವವು ಅಗಸ್ಟ್ 31ರಿಂದ ಸೆಪ್ಟಂಬರ್ 3ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಕ್ತೇಶ್ವರಿ ದೇವಿ ಸನ್ನಿಧಿಯ ವಠಾರದ ಸಭಾ ಮಂಟಪದಲ್ಲಿ ನಡೆದಿದ್ದು, ಇಂದು ಸಂಜೆ ಅದ್ದೂರಿಯಶೋಭಾಯಾತ್ರೆ ನಡೆಯಿತು.
ಅಗಸ್ಟ್ 31ರಂದು ಬೆಳಿಗ್ಗೆ ಬಂಟ್ವಾಳದಿಂದ ಮೂರ್ತಿ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪನಾ ಗಣಹೋಮ ನಡೆದ ಬಳಿಕ ಸಂಜೆ ಶ್ರೀ ರಾಮ ಭಜನಾ ಮಂದಿರ ಬಂಟ್ವಾಳ ಇವರಿಂದ ಭಜನೆ, ಕಲ್ಲಡ್ಕ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್‌ನ ವಿದುಷಿ ವಿದ್ಯಾ ಮನೋಜ್ ಇವರ ಶಿಷ್ಯೆಯರಿಂದ ನೃತ್ಯ ಸಿಂಚನ ಭರತನಾಟ್ಯ, ಸೆಪ್ಟಂಬರ್ 1ರಂದು ಸಂಜೆ ಸತ್ಯಸಾಯಿ ಸೇವಾ ಕೇಂದ್ರ ಜೋಡುಮಾರ್ಗ ಇವರಿಂದ ಭಜನೆ, ಸುಮನಸ ಯಕ್ಷ ಬಳಗ ಬಂಟ್ವಾಳ ಇವರ ಸದಸ್ಯರಿಂದ ಯೋಗೀಶ್ ಶರ್ಮ ಅಳದಂಗಡಿ ಮಾರ್ಗದರ್ಶನದಲ್ಲಿ ಯಕ್ಷ ಗಾನ ವೈಭವ ಮತ್ತು ಗಣೇಶೋದ್ಭವ ಯಕ್ಷಗಾನ ಬಯಲಾಟ, ಸೆಪ್ಟಂಬರ್ 2ರಂದು ಕೂಟ ಮಹಾಜಗತ್ತು ಸಾಲಿಗ್ರಾಮ ಬಂಟ್ವಾಳ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಚಾಪರ್ಕ ತಂಡ ದೇವದಾಸ ಕಾಪಿಕಾಡ್ ನಿರ್ದೇಶನದ ನಮಸ್ಕಾರ ಮಾಸ್ಟ್ರೇ ನಾಟಕ ನಡೆಯಿತು.
ಸೆಪ್ಟೆಂಬರ್ 3ರಂದು ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ 3.30ಕ್ಕೆ ಬಿ.ಸಿ.ರೋಡು ಎಸ್. ಎನ್. ಹೊಳ್ಳ ಚಿಲಿಪಿಲಿ ಬಳಗದವರಿಂದ ಗೊಂಬೆ ಕುಣಿತ, ಅದ್ದೂರಿಯ ಹುಲಿವೇಷ ಕುಣಿತ, ಮಹಾಪೂಜೆ, ರಂಗಪೂಜೆ, ಹಾಗೂ ವಿಸರ್ಜನಾ ಪೂಜೆಯ ಬಳಿಕ ಶೋಭಾಯಾತ್ರೆ ಆರಂಭಗೊಂಡಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸ್ಥಳೀಯ ಪುರಸಭಾ ಸದಸ್ಯ ಅರಳ ಗೋವಿಂದ ಪ್ರಭು, ಹಿಂದೂ ಧಾರ್ಮಿಕ ಸೇವಾ ಸಮಿತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಮ್. ಸತೀಶ್ ಭಂಡಾರಿ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಸಹಿತ ಸ್ಥಳೀಯ ಪ್ರಮುಖರು ಈ ಸಂದರ್ಭ ಹಾಜರಿದ್ದರು.
ವೈಭವದ ಮೆರವಣಿಗೆ: ಶ್ರೀ ರಾಮ ಗೆಳೆಯರ ಬಳಗ ಕೈಕಂಬ ಬಿ ಸಿ ರೋಡು ಇದರ ವತಿಯಿಂದ ಬೃಹತ್ ಆಕಾರದ ಕಡ್ಲೆ ಚುಕ್ಕಿ ಮಾಲೆಯೊಂದಿಗೆ ಅಲಂಕೃತನಾದ ಗಣಪತಿಯ ಮೆರವಣಿಗೆ ವೈಭವದಲ್ಲಿ ಸಾಗಿತು. ಹುಲಿವೇಷ, ಚೆಂಡೆ ವಾದನ, ಗೊಂಬೆ ಕುಣಿತ, ವಿವಿಧ ಟ್ಯಾಬ್ಲೊಗಳು ಮೆರುಗು ನೀಡಿದವು. ಸಿಡಿಮದ್ದಿನ ಆಕರ್ಷಣೆಯೊಂದಿಗೆ ನೂರಾರು ಭಕ್ತರು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.