ಬಂಟ್ವಾಳ: ತಮಗೆ ಅರಿವಿಲ್ಲದೆ ದುಶ್ಚಟಗಳ ದಾಸರಾಗಿ ಹಾದಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರಲು ಉಲಮಾ, ಉಮರಾಗಳು ಒಂದಾಗಿ ಶ್ರಮಿಸಬೇಕು ಎಂದು ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯದುಲ್ ಉಲಮಾ ಶೈಖುನಾ ಮುಹಮ್ಮದ್ ಜಿಫ್ರೀ ಮುತ್ತು ಕೋಯ ತಂಙಳ್ ಕರೆ ನೀಡಿದರು.
ಮಾದಕ ದ್ರವ್ಯಗಳ ಸಹಿತ ಅಕ್ರಮ ಚಟುವಟಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ವತಿಯಿಂದ ತಾಲೂಕಿನ ಜನಪ್ರಿಯ ಗಾರ್ಡನ್ ಸಭಾಸಭವನದಲ್ಲಿ ಹಮ್ಮಿಕೊಂಡ ‘ಉಲಮಾ ಉಮರಾ ಕಾನ್ಫರೆನ್ಸ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಅಧ್ಯಕ್ಷ ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಮಾತನಾಡಿ, ಶಾಲಾ ಕಾಲೇಜಿಗೆ ಹೋಗುವ ತಮ್ಮ ಮಕ್ಕಳ ಮೇಲೆ ಅವರಿಗೆ ಅರಿವಿಲ್ಲದಂತೆ ಪೋಷಕರು ನಿಗಾ ವಹಿಸಬೇಕು ಎಂದು ಹೇಳಿದರು.
ಕೆ.ಎಂ.ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ದ್ವಜಾರೋಹಣಗೈದರು. ಅಹ್ಮದ್ ಪೂಕೋಯ ತಂಙಳ್ ದುಅ ನೆರವೇರಿಸಿದರು. ಸಮಸ್ತ ಕರ್ನಾಟಕ ಮುಶಾವರ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಪ್ರಾಸ್ತಾವಿಕ ಭಾಷಣ ಮಾಡಿದರು. ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಬೆಳ್ತಂಗಡಿ ಕಾರ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ರಫೀಬ್ ಝಕರಿಯಾ ಫೈಝಿ ಕೋಝಿಕೋಡ್ ವಿಷಯ ಮಂಡನೆ ಮಾಡಿದರು.
ಕಾರ್ಯಕ್ರಮ ಸಂಘಟನೆಯ ಪ್ರಮುಖರಾದ ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬೂಬಕ್ಕರ್ ಸಿದ್ದೀಕ್ ದಾರಿಮಿ ಕಡಬ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಖಾಸಿಂ ದಾರಿಮಿ ನಂದಾವರ ಉಪಸ್ಥಿತರಿದ್ದರು. ಕೆ.ಎಂ.ಉಸ್ಮಾನ್ ಫೈಝಿ ತೋಡಾರ್ ಸ್ವಾಗತಿಸಿದರು. ಕೆ.ಪಿ.ಎಂ. ಶರೀಫ್ ಪೈಝಿ ಕಡಬ ಧನ್ಯವಾದಗೈದರು.