ಬಂಟ್ವಾಳ: ಕೇಂದ್ರದ ಎನ್.ಡಿ.ಎ. ಸರ್ಕಾರದ ದುರಾಡಳಿತ ವಿರುದ್ಧ ಕೆಂಬಾವುಟ ಹಿಡಿದು ಹೋರಾಟ ಇಂದು ಅಗತ್ಯವಿದ್ದು, ಇದುವರೆಗಿನ ಇತಿಹಾಸದಲ್ಲಿ ಸಿಪಿಐ ಹಕ್ಕೊತ್ತಾಯದಿಂದಾಗಿಯೇ ಉಳುವವನು ಹೊಲದೊಡೆಯನಾಗಿದ್ದಾನೆ. ಕೋಮುವಾದವನ್ನು ಮೆಟ್ಟಿ ನಿಲ್ಲಲು ಸಿಪಿಐ ಬಲಗೊಳ್ಳುವುದು ಅನಿವಾರ್ಯ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಮಾಜಿ ಸದಸ್ಯ ಡಾ. ಸಿದ್ಧನಗೌಡ ಪಾಟೀಲ ಹೇಳಿದ್ದಾರೆ.
ಬಂಟ್ವಾಳದ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ)ದ ದ.ಕ. ಮತ್ತು ಉಡುಪಿ ಜಿಲ್ಲಾ ೨೪ನೇ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಗುಲಾಮರಾಗಿದ್ದ ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯ ಸಿಕ್ಕ ಮೇಲೆ ಹೋರಾಟಗಾರರಾಗುತ್ತಾರೆ. ಆದರೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಾದ ಕಮ್ಯೂನಿಸ್ಟ್ ಪಕ್ಷದ ಬಹುತೇಕ ನಾಯಕರು ಜೈಲಿನಲ್ಲಿರುತ್ತಾರೆ. ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆಗೆ ಗುರುವಾಗಿದ್ದ ಸಾವರ್ಕರ್‌ಗೆ ಇಂದು ಹೋರಾಟಗಾರರ ಪಟ್ಟಕಟ್ಟಿ ಪಠ್ಯಪುಸ್ತಕದಲ್ಲಿ ಸ್ಥಾನ ನೀಡಿರುವುದು ದುರಂತ ಎಂದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮುಖ್ಯಭಾಷಣ ಮಾಡಿ, ಜನರಿಗೆ ಉದ್ಯೋಗವೇ ಇಲ್ಲದಾಗಿದ್ದು, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ದೇಶದ ಸಾರ್ವಜನಿಕ ಉದ್ದಿಮೆ, ಮೂಲ ಸೌಲಭ್ಯಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇವೆಲ್ಲದರ ವಿರುದ್ಧ ಯುವಶಕ್ತಿ ಸಿಪಿಐ ಜತೆಸೇರಿ ಹೋರಾಟ ಸಂಘಟಿಸಬೇಕಿದೆ ಎಂದರು.
ಸಿಪಿಐ ದ.ಕ.ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ನೂತನ ಕಾರ್ಯದರ್ಶಿ ಬಿ.ಶೇಖರ್ ಪ್ರಸ್ತಾವನೆಗೈದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್‌ಕುಮಾರ್ ನೇತೃತ್ವದಲ್ಲಿ ಕ್ರಾಂತಿ ಗೀತೆ ಹಾಡಲಾಯಿತು. ಪಕ್ಷದ ಪ್ರಮುಖರಾದ ಪುಷ್ಪರಾಜ್ ಬೋಳಾರ್, ಎ.ಪ್ರಭಾಕರ ರಾವ್, ಭಾರತಿ ಶಂಭೂರು, ಕರುಣಾಕರ ಎಂ., ಬಿ.ಬಾಬು ಭಂಡಾರಿ, ಮೂಡಿಗೆರೆಯ ಮುಂದಾಳು ರಮೇಶ್ ಕುಮಾರ್ ಮೊದಲಾದವರಿದ್ದರು. ಜಿಲ್ಲಾ ಸಹ ಕಾರ್ಯದರ್ಶಿ ವಿ.ಸೀತಾರಾಮ ಬೇರಿಂಜ ಕಾರ್ಯಕ್ರಮ ನಿರ್ವಹಿಸಿದರು. ಸಭೆಯ ಪೂರ್ವಭಾವಿಯಾಗಿ ಬಿ.ಸಿ.ರೋಡಿನ ಕೈಕಂಬದಿಂದ ಸಮ್ಮೇಳನದ ಸಭಾಭವದವರೆಗೆ ಬೃಹತ್ ರ್‍ಯಾಲಿ ನಡೆಯಿತು.