ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಪಕ್ಷದ ಕಾರ್ಯಕರ್ತರ ಸಭಾ ಕಾರ್ಯಕ್ರಮವು ಬಿಸಿ ರೋಡ್ ನ ಅಲ್ ಖಝಾನ ಸಭಾಂಗಣದಲ್ಲಿ ಜರುಗಿತು. ಈ ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು.
ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶಾಹುಲ್ ಎಸ್ ಎಚ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಮಾತನಾಡಿ ರಾಜ್ಯ ಬಿಜೆಪಿ ನಿರಂಕುಶವಾದದ ಧೋರಣೆಗಳನ್ನು ಎಸಗುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿಗಳಂತಹ ಜಾತ್ಯಾತೀತ ಪಕ್ಷಗಳು ಮೌನದಿಂದಿರುವುದು ಖಂಡನಾರ್ಹ ಎಂದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಜಿಲ್ಲೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದು, ಅದರಲ್ಲಿ ಬಂಟ್ವಾಳವೂ ಒಂದಾಗಿದೆ. ಪರ್ಯಾಯ ರಾಜಕೀಯ ವ್ಯವಸ್ಥೆ ಎಸ್ ಡಿ ಪಿ ಐ ಕುರಿತು ಜನಮನದಲ್ಲಿ ಅಚ್ಚುಮೂಡಿಸಿ ಬಂಟ್ವಾಳದಲ್ಲಿ ಗೆಲ್ಲಿಸುವ ಶತ ಪ್ರಯತ್ನವನ್ನು ಕಾರ್ಯಕರ್ತರು ಮಾಡಬೇಕು. ಪ್ರತಿಯೊಂದು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಮಾತನಾಡಿ ಪ್ರಸ್ತುತ ರಾಜ್ಯದಲ್ಲಿ ಅರಾಜಕತೆಯಲ್ಲಿ ಮುಳುಗಿದೆ, ಈ ಎಲ್ಲ ಸತ್ಯದ ಸಂಗತಿಗಳನ್ನು ಪಕ್ಷದ ಕಾರ್ಯಕರ್ತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಭಾಜಪಾವನ್ನು ಅಧಿಕಾರದಿಂದ ನಿರ್ಮೂಲನೆ ಮಾಡುವಲ್ಲಿ ನಿರತರಾಗಬೇಕು ಎಂದು ಹೇಳಿದರು.
ಎಸ್ ಡಿ ಪಿ ಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಪಕ್ಷದ ಬೆಳವಣಿಗೆ ಮತ್ತು ಪ್ರಸ್ತುತ ಆಗುಹೋಗುಗಳ ಬಗ್ಗೆ ನುಡಿದು ಪ್ರಾಸ್ತಾವಿಕ ಭಾಷಣಗೈದರು. ದ.ಕ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಸಮಾರೋಪ ಭಾಷಣಗೈದರು.
ಈ ಸಂದರ್ಭ ಎಸ್ ಡಿ ಪಿ ಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ದ.ಕ ಜಿಲ್ಲಾ ಸಮಿತಿ ಸದಸ್ಯರುಗಳಾದ ಅಬೂಬಕ್ಕರ್ ಮದ್ದ, ಯೂಸುಫ್ ಆಲಡ್ಕ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಂಟ್ವಾಳ ತಾಲೂಕಿನವರು ಆದ ಇಲ್ಯಾಸ್ ಮುಹಮ್ಮದ್ ತುಂಬೆಯವರನ್ನು ಬಂಟ್ವಾಳ ಕ್ಷೇತ್ರ ಸಮಿತಿಯ ವತಿಯಿಂದ ಶಾಲು ಹಾಕಿ ಹೂಗುಚ್ಚ ನೀಡಿ ಸನ್ಮಾನಿಸಲಾಯಿತು . ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು ಶಾಹುಲ್ ಹಮೀದ್ ಸ್ವಾಗತಿಸಿ ಮೂನಿಶ್ ಆಲಿ ಧನ್ಯವಾದಗೈದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…