ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರನ್ನು ದ.ಕ.ಜಿಲ್ಲಾ ಪೊಲೀಸ್ ಘಟಕದಲ್ಲಿ ಸೋಮವಾರ ಅಭಿನಂದಿಸಲಾಯಿತು.
ಯಾವುದೇ ರೀತಿಯ ಸುಳಿವು ಇಲ್ಲದೇ ಇದ್ದ ಸೂಕ್ಷ್ಮ ಪ್ರಕರಣವನ್ನು ಕೆಲವೇ ದಿನಗಳಲ್ಲಿ ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಅಧಿಕಾರಿ, ಸಿಬ್ಬಂದಿಗಳನ್ನು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ದೇ ನೇತೃತ್ವದಲ್ಲಿ ಅಭಿನಂದಿಸಿ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಇದು ಯಾವುದೇ ಓರ್ವ ಅಧಿಕಾರಿ, ಸಿಬ್ಬಂದಿಯ ವೈಯಕ್ತಿಕ ಕೆಲಸವಾಗಿರದೆ ಎಲ್ಲ 82 ಮಂದಿಯ ಸತತ ಪರಿಶ್ರಮದ ಫಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಎಸ್ಪಿ ಋಷಿಕೇಶ್ ಸೋನಾವಣೆ ಮತ್ತಿತರರು ಉಪಸ್ಥಿತರಿದ್ದರು.
ಆಪಾದಿತರನ್ನು ಪತ್ತೆಹಚ್ಚಲು ಬೆಳ್ಳಾರೆ, ಸುಳ್ಯ, ಸುಬ್ರಹ್ಮಣ್ಯ, ಕಡಬ, ವಿಟ್ಲ, ಬೆಳ್ತಂಗಡಿ, ಪುತ್ತೂರು ಮತ್ತು ಬಂಟ್ವಾಳ ಸೇರಿ ದ.ಕ. ಜಿಲ್ಲೆ, ಪಶ್ಚಿಮ ವಲಯ ಅಧಿಕಾರಿಗಳ ಸಿಬ್ಬಂದಿ ತನಿಖಾ ತಂಡ ರಚಿಸಿ, ರಾಜ್ಯ, ಹೊರರಾಜ್ಯದ ವಿವಿಧೆಡೆ ಪತ್ತೆಗೆ ಪ್ರಯತ್ನಿಸಲಾಗಿತ್ತು. ಒಟ್ಟು 82 ಮಂದಿ ಅಧಿಕಾರಿ ಸಿಬ್ಬಂದಿಯತನಿಖಾ ತಂಡ ಇದರಲ್ಲಿ ಪಾಲ್ಗೊಂಡಿತ್ತು.