ಬಂಟ್ವಾಳ: ಪ್ರಸ್ತುತ ದಿನಗಳಲ್ಲಿ ದೇಶ ಧನಾತ್ಮಕ ಬದಲಾವಣೆಯತ್ತ ಸಾಗುತ್ತಿದ್ದು, ಪ್ರತಿಯೊಬ್ಬರ ಸ್ವಾಭಿಮಾನದ ಬದುಕಿಗಾಗಿ ಶಿಕ್ಷಣ ಹಾಗೂ ಆರೋಗ್ಯ ಉತ್ತಮ ರೀತಿಯಲ್ಲಿ ಸಿಕ್ಕಾಗ ಅವರಿಗೆ ಉತ್ತಮ ರೀತಿಯ ಬದುಕು ಸಾಗಿಸಲು ಅನುಕೂಲವಾಗುತ್ತದೆ. ಸಮಾಜದ ಅಭಿವೃದ್ಧಿ ಹಾಗೂ ಶಾಂತಿಗೆ ಪತ್ರಕರ್ತರ ಸಹಕಾರ ಅತಿ ಅಗತ್ಯವಾಗಿದೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನೀಡಲ್ಪಟ್ಟ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಬಂಟ್ವಾಳ ತಾಲೂಕು ಸಂಘಕ್ಕೆ ಶಾಸಕರ ವಿಶೇಷ ಮುತುವರ್ಜಿಯಿಂದ ಸ್ವಂತ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಇದು ರಾಜ್ಯದಲ್ಲೇ ಮಾದರಿಯಾಗಿರುವ ಜತೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಪತ್ರಕರ್ತರ ಗೃಹ ನಿರ್ಮಾಣ ಸಂಘದ ಮೂಲಕ ನಿವೇಶನ ನೀಡುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕರ ಸಹಕಾರವು ಅತಿ ಅಗತ್ಯವಾಗಿದ್ದು, ಪತ್ರಕರ್ತರಿಗೆ ಕ್ಯಾಶ್ ಲೆಸ್ ಆರೋಗ್ಯ ಕಾರ್ಡ್ ದೊರಕಿಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಅತ್ತಾವರ ಕೆಎಂಸಿ ಆಸ್ಪತ್ರೆಯ ರಿಲೇಶನ್‌ಶಿಪ್ ಹಾಗೂ ಕಮ್ಯುನಿಕೇಶನ್ ವಿಭಾಗದ ಸಂಯೋಜಕ ಹರ್ಬರ್ಟ್ ಪಿರೇರಾ ಅವರು ಮಣಿಪಾಲ್ ಆರೋಗ್ಯ ಕಾರ್ಡ್ ಕುರಿತು ಮಾಹಿತಿ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಸ್ವಾಗತಿಸಿ, ಉಪಾಧ್ಯಕ್ಷ ಯಾದವ ಅಗ್ರಬೈಲು ವಂದಿಸಿದರು. ಸದಸ್ಯ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.