ಕೃಷಿ ಇಲಾಖೆ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಆತ್ಮ ಯೋಜನೆಯಡಿ ಜಿಲ್ಲೆಯೊಳಗಿನ ತರಬೇತಿ ಕಾರ್ಯಕ್ರಮ ಹಾಗೂ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಬಂಟ್ವಾಳ ಲಯನ್ಸ್ ಸೇವಾ ಮಂದಿರ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೃಷಿ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪಿಎಂಎಫ್ ಎಂಇ ಯೋಜನೆಯ ಸೌಲಭ್ಯವನ್ನು ಪಡೆದು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ವಸಹಾಯ ಸಂಘದ ರೈತರು, ರೈತ ಉತ್ಪಾದಕ ಸಂಘದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಸುಮಾರು 300ಕ್ಕೂ ಅಧಿಕ ಮಿಕ್ಕಿ ರೈತಬಾಂಧವರು, ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್, ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್, ಪಿಎಂಎಫ್ಇ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ. ಫಜಲ್, ಹಾಗೂ ಸಂಕಪ್ಪ ಶೆಟ್ಟಿ, ಕೃಷಿ ಅಧಿಕಾರಿಗಳಾದ ಬಿ.ಬಿ.ಅನಘವಾಡಿ, ಎಸ್.ಕೆ.ಸರಿಕ್ಕರ್, ಆತ್ಮ ಯೋಜನೆಯ ಬಿಟಿಎಂ ದೀಕ್ಷಾ, ಹನುಮಂತ ಕಾಳಗಿ, ವಿರೂಪಾಕ್ಷಿ ಉಪಸ್ಥಿತರಿದ್ದರು.
ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ನಂದನ್ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿದರು. ಈ ಸಂದರ್ಭ ಪಿಎಂಎಫ್ ಎಂಇ ಯೋಜನೆ ಕುರಿತು ಮಾಹಿತಿ ಕಾರ್ಯಕ್ರಮ, ಬ್ಯಾಂಕುಗಳಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನಡೆಯಿತು. ರೈತರಿಗೆ ಸ್ಥಳದಲ್ಲಿಯೇ ಪಿಎಂಕಿಸಾನ್, ಫ್ರುಟ್ಸ್ ಎಫ್ ಐಡಿ ನೋಂದಣಿ ಮಾಡಲಾಯಿತು.