ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ಆಗಸ್ಟ್ 8ರಂದು ಶ್ರೀಗಳವರ ಜನ್ಮದಿನೋತ್ಸವ ಮತ್ತು ಗ್ರಾಮೋತ್ಸವ ೨೦೨೨-ಗುರುವಂದನ ಕಾರ್ಯಕ್ರಮ ಹಾಗೂ ಶ್ರೀಮಾತಾ ಅನ್ನಛತ್ರ ಉದ್ಘಾಟನಾ ಸಮಾರಂಭ ನಡೆಯಲಿದೆ.
ಬೆಳಗ್ಗೆ ೯ರಿಂದ ಸಾಧ್ವಿ ಶ್ರೀ ಮಾತಾನಂದಮಯೀ ಅವರಿಂದ ಭಜನಾ ಸತ್ಸಂಗ, ೯.೩೦ಕ್ಕೆ ರಾಜಾಂಗಣಕ್ಕೆ ಶೋಭಾಯಾತ್ರೆ, ನಂತರ ಪಾದಪೂಜೆ, ತುಲಾಭಾರ, ಉಯ್ಯಾಲೆಸೇವೆ, ಗುರುವಂದನೆ ನಡೆಯಲಿದೆ. ೧೧ ಗಂಟೆಗೆ ಶ್ರೀಮಾತಾ ಅನ್ನಛತ್ರ ಉದ್ಘಾಟನಾ ಸಮಾರಂಭ ಬಳಿಕ ಧರ್ಮಸಭೆ ನಡೆಯಲಿದ್ದು, ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಅನುಗ್ರಹ ಸಂದೇಶ ನೀಡಲಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಿದ್ದು, ಮುಂಬೈನ ಉದ್ಯಮಿ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಅನ್ನಛತ್ರ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಶಾಸಕರಾದ ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಆರೆಸ್ಸೆಸ್ ದ.ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್, ಮಂಗಳೂರು ವಿವಿ ಪ್ರಿನ್ಸಿಪಾಲ್ ಡಾ. ಅನಸೋಯಾ ಕಿಶೋರ್ ಶೆಟ್ಟಿ, ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್, ವಾಮಯ್ಯ ಬಿ.ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ದಯಾನಂದ ಹೆಗ್ಡೆ ಭಾಗವಹಿಸುವರು. ಬಾಲಪ್ರತಿಭಾ ಪುರಸ್ಕಾರವನ್ನು ಚಿಂತನ್ ಎಸ್.ಶೆಟ್ಟಿ ಅವರಿಗೆ ನೀಡಲಾಗುವುದು. ರಾತ್ರಿ ೭ರಿಂದ ಶ್ರೀ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿರಥೋತ್ಸವ ಸೇವೆ ನಡೆಯಲಿದೆ ಎಂದು ಶ್ರೀಸಂಸ್ಥಾನದ ಪ್ರಕಟಣೆ ತಿಳಿಸಿದೆ.