ಬಂಟ್ವಾಳ: ಘರ್ ಘರ್ ತಿರಂಗಾ – ಮನೆ ಮನೆಯಲ್ಲೂ ರಾಷ್ಟ್ರಧ್ವಜ ಎಂಬ ಪರಿಕಲ್ಪನೆಯಡಿ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಣೆ ಸಂದರ್ಭ ಆಗಸ್ಟ್ 13ರಿಂದ 15ರವರೆಗೆ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಲುವಾಗಿ ಪೂರ್ವಭಾವಿ ಸಭೆ ಬಂಟ್ವಾಳ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆಯಿತು.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಎಲ್ಲ ಅಂಗಡಿ, ವಾಣಿಜ್ಯ ಸಂಕೀರ್ಣ, ಮನೆ, ಸರ್ಕಾರಿ ಕಚೇರಿ, ಸರ್ಕಾರೇತರ ಸಂಘ ಸಂಸ್ಥೆಗಳು, ವಸತಿ ಸಮುಚ್ಚಯಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು, ಈಗಾಗಲೇ 600 ಧ್ವಜಗಳನ್ನು ಪುರಸಭೆಗೆ ಒದಗಿಸಲಾಗಿದೆ ಎಂದು ಮಹಮ್ಮದ್ ಶರೀಫ್ ಹೇಳಿದರು.
ರಾಷ್ಟ್ರಧ್ವಜಕ್ಕೆ ಗೌರವಸೂಚಕವಾಗಿ ಅದನ್ನು ಹೇಗೆ ಬಳಸುವುದು ಹಾಗೂ ಕಾರ್ಯಕ್ರಮವಾದ ಬಳಿಕ ಎಲ್ಲೆಂದರಲ್ಲಿ ಎಸೆಯದಂತೆ, ಅಗೌರವ ತೋರದಂತೆ ವರ್ತಿಸಬೇಕಾದ ಕಾರಣ ಸರಿಯಾದ ಮಾಹಿತಿಯನ್ನು ನೀಡುವುದು ಒಳಿತು ಎಂದು ಸದಸ್ಯ ಗಂಗಾಧರ ಪೂಜಾರಿ ಸಲಹೆ ನೀಡಿದರು. ಗುಣಮಟ್ಟದ ರಾಷ್ಟ್ರಧ್ವಜ ದೊರಕುತ್ತಿಲ್ಲ ಎಂಬುದರ ಕುರಿತು ಮಾಜಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮತ್ತು ಸದಸ್ಯರಾದ ಲೋಲಾಕ್ಷ, ಸಿದ್ಧೀಕ್ ಗುಡ್ಡೆಯಂಗಡಿ ಗಮನ ಸೆಳೆದರು. ಸದಸ್ಯರಾದ ಹರಿಪ್ರಸಾದ್, ಮೀನಾಕ್ಷಿ, ಶಶಿಕಲಾ, ದೇವಕಿ, ಮಾಜಿ ಸದಸ್ಯೆ ವಸಂತಿ ಗಂಗಾಧರ್, ನಾಗರಿಕ ಪ್ರಮುಖರಾದ ದಾಮೋದರ್ ಸಂಚಯಗಿರಿ ಈ ಸಂದರ್ಭ ವಿವಿಧ ಸಲಹೆ ಸೂಚನೆ ನೀಡಿದರು. ಪುರಸಭೆ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮ್ಯಾನೇಜರ್ ಲೀಲಾವತಿ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ವಿವಿಧ ಸ್ವಸಹಾಯ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು. ಸಮುದಾಯ ಅಭಿವೃದ್ಧಿ ಸಂಘಟಕಿ ಉಮಾವತಿ ಸ್ವಾಗತಿಸಿ ವಂದಿಸಿದರು.