ಬಂಟ್ವಾಳ: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್(32) ಅವರ ಕೊಲೆಗೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಬಿ.ಸಿ.ರೋಡ್ ಸುತ್ತಮುತ್ತ ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಿದಂತೆ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬುಧವಾರ ಬಂದ್ ಆದವು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕಿಶೋರ್ ಪಲ್ಲಿಪ್ಪಾಡಿ, ನಿರಂತರವಾಗಿ ಹಿಂದು ಕಾರ್ಯಕರ್ತರ ಹತ್ಯೆಗಳು ಆಗುತ್ತಿವೆ. ಆರೆಸ್ಸೆಸ್ ಸ್ವಯಂಸೇವಕ ಶರತ್ ಮಡಿವಾಳ ಸಹಿತ ಬಜರಂಗದಳ, ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರ ಹತ್ಯೆಗಳು, ಹಲ್ಲೆಗಳೂ ನಡೆಯುತ್ತಿವೆ. ಈ ಮೂಲಕ ಸ್ವಯಂಪ್ರೇರಿತವಾಗಿ ಬಂದ್ ನಡೆಸುವಂತೆ ಬಿ.ಸಿ.ರೋಢ್ ಪರಿಸರದವರಿಗೆ ಕರೆ ನೀಡಿದಾಗ ಎಲ್ಲರೂ ಸ್ಪಂದಿಸಿದ್ದಾರೆ. ಮತಾಂಧರಿಗೆ ಬಿಜೆಪಿಯವರು, ಸಂಘಪರಿವಾರದವರು ಎಂಬ ಬೇಧವಿಲ್ಲ. ಹೀಗಾಗಿ ಹಿಂದುಗಳೆಲ್ಲರೂ ಈ ಘಟನೆಯಿಂದ ಒಂದಾಗಿದ್ದಾರೆ. ನಾವೆಲ್ಲ ಸಂಘಟನೆಗಳ ಸದಸ್ಯರು ಒಟ್ಟಾಗಿದ್ದೇವೆ ಎಂದರು.
ಈ ಸಂದರ್ಭ ಯುವ ಮೋರ್ಚಾ ಕ್ಷೇತ್ರಾಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಹಿಂಜಾವೇ ಪ್ರಮುಖರಾದ ತಿರುಲೇಶ್ ಬೆಳ್ಳೂರು, ಪ್ರಶಾಂತ್ ಕೆಂಪುಗುಡ್ಡೆ, ವಿವಿಧ ಸಂಘಟನೆಗಳ ಪ್ರಮುಖರಾದ ಪ್ರಮುಖರಾದ ಭುವಿತ್ ಶೆಟ್ಟಿ, ಅಶ್ವತ್ಥ್ ರಾವ್ ಬಾಳಿಕೆ, ನಿತೇಶ್, ಪ್ರಕಾಶ್ ಬೆಳ್ಳೂರು, ಲಕ್ಷಣರಾಜ್, ಸುರೇಶ್ ಕೋಟ್ಯಾನ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.