ಒಂದೆಡೆ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದರೆ, ಮತ್ತೊಂದೆಡೆ ಸೋಮವಾರ ಬೆಳಗ್ಗೆ ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಇಳಿಕೆ ಕಂಡಿದೆ. ಭಾನುವಾರ ಬೆಳಗ್ಗೆ ಅಪಾಯದ ಮಟ್ಟವಾದ 8.5 ಮೀರಿ 8.7ರವರೆಗೆ ತಲುಪಿ ಆತಂಕ ಮೂಡಿಸಿದ್ದ ನದಿ, ಸೋಮವಾರ ಬೆಳಗ್ಗೆ 7.3ಕ್ಕೆ ಇಳಿದಿದೆ. ಅಲ್ಲದೆ, ಭಾನುವಾರ ಜಲಾವೃತಗೊಂಡಿದ್ದ ಕೆಲ ತಗ್ಗು ಪ್ರದೇಶಗಳಲ್ಲೂ ನೀರು ಇಳಿಕೆಯಾಗುತ್ತಿದೆ. ಆದರೆ ಹಲವೆಡೆ ಇರುವ ಕೃತಕ ನೆರೆ, ನೀರು ಹೋಗಲು ಜಾಗವಿಲ್ಲದೆ ನಿಂತಿರುವ ಪರಿಸ್ಥಿತಿಗಳು ಹಾಗಯೇ ಇವೆ. ಸೋಮವಾರ ಬೆಳಗಿನ ಜಾವ ಇಳಿಕೆಯಾದರೂ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾದರೆ, ಮತ್ತೆ ಏರಿಕೆ ಕಾಣುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ.