ಪುಣಚ ಗ್ರಾಮ ವ್ಯಾಪ್ತಿಗೊಳಪಡುವ ದೇವಿನಗರ-ಕಲ್ಲಾಜೆ-ಮಡ್ಯಾರಬೆಟ್ಟು-ಆಜೇರು ಮೂಲಕ ಸಾರ್ಯಕ್ಕೆ ಸಾಗುವ ರಸ್ತೆಯ ಮಡ್ಯಾರಬೆಟ್ಟು ಕಿರು ಸೇತುವೆಯೊಂದು ಮಳೆ ನೀರಿನ ಪ್ರವಾಹದ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದು, ಈ ಸೇತುವೆಯನ್ನು ಬಳಸುವ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಪ್ರದೇಶದ ಈ ಸೇತುವೆಯನ್ನು 2013-2014 ರಲ್ಲಿ ಸಂಸದರ 5 ಲಕ್ಷ ಹಾಗೂ ಜಿ.ಪಂ.ನ 3 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿತ್ತು. ಹತ್ತು ವರ್ಷ ತುಂಬುವುದರೊಳಗೆ ಮಳೆನೀರಿಗೆ ಆಹುತಿಯಾಗಿದೆ. ಇದರಿಂದಾಗಿ ಆಜೇರು ಭಾಗದಿಂದ ಪುಣಚಕ್ಕೆ ಬರುವ, ಕಲ್ಲಾಜೆಯಿಂದ ಸಾಜ ಮೂಲಕ ಪುತ್ತೂರು ಹಾಗೂ ಇತರೆಡೆ ಗಳಿಗೆ ಸಾಗುವ ಜನರ ಸಂಚಾರಕ್ಕೆ ಸಂಚಕಾರ ಬಂದೊದಗಿದೆ. ಈ ಪ್ರದೇಶದಲ್ಲಿಯ ನಿತ್ಯ ಸಂಚಾರಿಗಳಿಗೆ, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಸಂಪರ್ಕ ಕಡಿತಗೊಂಡಿರುವುದರಿಂದ ಸಂಕಟ ಪಡುವಂತಾಗಿದೆ. ಪುಣಚ ಗ್ರಾಮದ ಕಲ್ಲಾಜೆ, ಮಲೆತ್ತಡ್ಕ,ಪೊಯ್ಯಮೂಲೆ ಇನ್ನಿತರ ಪ್ರದೇಶಗಳಲ್ಲಿಯೂ ಮಳೆಹಾನಿ ಸಂಭವಿಸಿದ್ದು ಮನೆ, ಕೃಷಿಭೂಮಿ ಗಳಿಗೆ ಹಾನಿಯಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರು,ವಾರ್ಡ್ ಸದಸ್ಯರುಗಳು ಪಿಡಿಒ,ಗ್ರಾಮ ಕರಣಿಕರೊಂದಿಗೆ ಮಳೆಹಾನಿ ಪ್ರದೇಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ತುರ್ತು ಕ್ರಮ ಕೈಗೊಂಡಿದ್ದಾರೆ.