ಬಂಟ್ವಾಳ: ಶನಿವಾರ ಧಾರಾಕಾರ ಮಳೆ ಸುರಿಯುತ್ತಿದ್ದು, ಸಂಜೆ ವೇಳೆ ನೇತ್ರಾವತಿ ನದಿ ಮಟ್ಟ 7.3 ಮೀಟರ್ ಗೆ ಏರಿಕೆ ಕಂಡಿದೆ. ಬೆಳಗ್ಗೆ 6.1 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನದಿ ಸಂಜೆ ವೇಳೆ ಏರಿಕೆ ಕಂಡಿತು. ಅಪಾಯದ ಮಟ್ಟ 8.5 ಮೀಟರ್ ಆಗಿದೆ.
ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಘಟ್ಟ ಪ್ರದೇಶದಲ್ಲಿ ನೀರಿನ ಹರಿವಿನ ಹೆಚ್ಚಳದ ಕಾರಣ ತಗ್ಗು ಪ್ರದೇಶದ ಜನರಿಗೆ ನೆರೆಭೀತಿ ಉಂಟಾಗಿದ್ದು, ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಡಾ. ಸ್ಮಿತಾ ರಾಮು ತಿಳಿಸಿದ್ದಾರೆ.
ಎಡೆಬಿಡದೆ ಸುರಿದ ಮಳೆಯಿಂದ ತಾಲೂಕಿನ ಅಲ್ಲಲ್ಲಿ ಮಣ್ಣುಕುಸಿತ ಮುಂದುವರಿದಿದ್ದು, ಕೆಲವೆಡೆ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ತಾಲೂಕಿನ ಹಲವೆಡೆ ಗುಡ್ಡ ಜರಿದ ಪ್ರಕರಣಗಳು ವರದಿಯಾಗಿವೆ.