ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಆದ ಭೂಕುಸಿತಕ್ಕೆ ಸಂಬಂಧಿಸಿದಂತೆ, ಓರ್ವ ಸಾವನ್ನಪ್ಪಿದ್ದು, ಮೂವರನ್ನು ರಕ್ಷಿಸಲಾಗಿದೆ.
ಕೇರಳದ ಪಾಲಕ್ಕಾಡ್ ನಿವಾಸಿ ಬಿಜು (45) ಸಾವನ್ನಪ್ಪಿದವರು. ಕಣ್ಣೂರಿನ ಜಾನಿ (44) ಮತ್ತು ಕೊಟ್ಟಾಯಂನ ಬಾಬು (46) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲಪ್ಪುರದ ಸಂತೋಷ್ (46) ಎಂಬಾತನ ಸ್ಥಿತಿ ಚಿಂತಾಜನಕವಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಮತ್ತು ಎಸ್ಪಿ ಋಷಿಕೇಶ್ ಸೋನಾವಣೆ ಭೇಟಿ ನೀಡಿದ್ದಾರೆ, ಮನೆಯೊಂದರ ಮೇಲೆ ಮಣ್ಣು ಜರಿದು, ನಾಲ್ವರು ಕೇರಳ ಮೂಲದ ಕಾರ್ಮಿಕರು ಸಿಲುಕಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಗುತ್ತಿದೆ.
ಸ್ಥಳೀಯ ವ್ಯಕ್ತಿಯೋರ್ವರಿಗೆ ಸೇರಿದ ಶೆಡ್ ರೀತಿಯ ಮನೆ ಮೇಲೆ ಮಣ್ಣು ಜರಿದು ಈ ಘಟನೆ ಸಂಭವಿಸಿದೆ. ಮನೆಯಲ್ಲಿ ಐವರು ವಾಸಿಸುತ್ತಿದ್ದು, ಅವರ ಪೈಕಿ ಓರ್ವ ಹೊರಗಿದ್ದರು. ನಾಲ್ವರು ಮನೆಯೊಳಗಿದ್ದರು. ಈ ಸಂದರ್ಭ ಭೂಕುಸಿತ ಉಂಟಾಗಿದೆ.