ಕರ್ನಾಟಕ ನಗರ ನೀರು ಸರಬರಾಜು ಯೋಜನೆಯ ಎರಡನೇ ಹಂತದ 64 ಕೋಟಿ ರೂ ವೆಚ್ಚದ ಒಳಚರಂಡಿ ಕಾಮಗಾರಿ ಆರಂಭಗೊಳಿಸುವ ಮೊದಲು ಮೊದಲನೇ ಹಂತದ ಕೆಲಸದ ಕುರಿತು ಪರಿಶೀಲನೆ ನಡೆಸಿ, ಬಳಿಕ ಮುಂದುವರಿಯಬೇಕು ಎಂದು ಬಂಟ್ವಾಳ ಪುರಸಭೆಯ ಸಭಾಂಗಣದಲ್ಲಿ ಬುಧವಾರ ಕರೆದ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಮಹಮ್ಮದ್ ಶರೀಫ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಬಾರಿ ಪುರಸಭಾ ವ್ಯಾಪ್ತಿಯಲ್ಲಿ ಮಾಡಿದ ಒಳಚರಂಡಿ ಕಾಮಗಾರಿ ವ್ಯವಸ್ಥಿತವಾಗಿ ಆಗಲಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟವಾದ ಆದೇಶವನ್ನು ನೀಡಲಾಗಿದ್ದು, ಎರಡನೇ ಹಂತದ ಆರಂಭಗೊಳ್ಳುವ ಹಂತದಲ್ಲಿ ಮೊದಲು ಮಾಡಿದ ವ್ಯವಸ್ಥೆಯನ್ನು ಪರಿಶೀಲಿಸಬೇಕು, ಬಳಿಕವೇ ಮುಂದುವರಿಯಬೇಕು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು ಎಂದರು. ಇದೇ ವೇಳೆ ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ವಿಲೇವಾರಿಯನ್ನು ಸೂಕ್ತ ರೀತಿಯಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ವಹಿಸಲು ತೀರ್ಮಾನಿಸಲಾಯಿತು.
ವಿವಿಧ ವಿಚಾರಗಳ ಕುರಿತು ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮಾಜಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಸದಸ್ಯರಾದ ವಾಸು ಪೂಜಾರಿ, ಸಿದ್ಧೀಕ್ ಗುಡ್ಡೆಯಂಗಡಿ, ಇದ್ರೀಸ್ ಪಿ.ಜೆ, ಝೀನತ್ ಫಿರೋಜ್, ಹಸೈನಾರ್, ಗಂಗಾಧರ ಪೂಜಾರಿ, ಲೋಲಾಕ್ಷ ಶೆಟ್ಟಿ, ಮೊನೀಶ್ ಆಲಿ, ಗಾಯತ್ರಿ ಪ್ರಕಾಶ್ ಮಾತನಾಡಿದರು. ಇಂಜಿನಿಯರ್ ಶೋಭಾಲಕ್ಷ್ಮೀ, ಡೊಮಿನಿಕ್ ಡಿಮೆಲ್ಲೊ ಪೂರಕ ಮಾಹಿತಿ ನೀಡಿದರು. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಉಪಸ್ಥಿತರಿದ್ದು, ಸ್ವಾಗತಿಸಿ, ವಂದಿಸಿದರು.