ಬಂಟ್ವಾಳ: ಕಾರ್ಯಾಚರಣೆಯೊಂದರಲ್ಲಿ ವಿಟ್ಲ ಪೊಲೀಸರು ಗೋವು ಅಕ್ರಮ ಸಾಗಾಟವೊಂದನ್ನು ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಶುಕ್ರವಾರ ಸಂಜೆ ಪತ್ತೆಹಚ್ಚಿದ್ದು, ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೊಹಮ್ಮದ್, ಹಮೀದ್ ಮತ್ತು ಪವನ್ ರಾಜ್ ಆರೋಪಿಗಳು. ಚಾಲಕ ಮೊಹಮ್ಮದ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಈ ಸಂಬಂಧ ಗೋವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಚಾಲಕ ತಿಳಿಸಿದ್ದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಟ್ಲ ಎಸ್.ಐ. ಸಂದೀಪ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮಾಣಿ ಜಂಕ್ಷನ್ ನಲ್ಲಿ ಬೊಲೆರೋ ಪಿಕ್ ಆಪ್ ವಾಹನವನ್ನು ನಿಲ್ಲಿಸಿದಾಗ, ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಅಂದಾಜು 8 ಸಾವಿರ ರೂ ಮೌಲ್ಯದ ಕಪ್ಪು ಬಣ್ಣದ ದೊಡ್ಡ ಗಾತ್ರದ ಜಿರ್ಸಿ ಹಸು, 10 ಸಾವಿರ ರೂ ಮೌಲ್ಯದ ತಿಳಿ ಕಂದು ಬಣ್ಣದ ಜೆರ್ಸಿ ಹಸು 2 ಸಾವಿರ ರೂ ಮೌಲ್ಯದ ಕಂದು ಬಣ್ಣದ ಕಪ್ಪು ಮಿಶ್ರಿತ ಗಂಡು ಕರು ಹೀಗೆ ಒಟ್ಟು 20 ಸಾವಿರ ರೂ ಮೌಲ್ಯದ ಮೂರು ಜಾನುವಾರುಗಳು ವಾಹನದಲ್ಲಿದ್ದವು. ಪಿಕಪ್ ಸೇರಿದಂತೆ ಜಾನುವಾರುಗಳನ್ನು ಸ್ವಾದೀನಪಡಿಸಿಕೊಂಡು, ಸಾಗಾಟ ಮಾಡುತ್ತಿದ್ದ ಪಿಕಪ್ ಚಾಲಕ ಮೊಹಮ್ಮದ್ ಎಂಬಾತನನ್ನು ವಶಕ್ಕೆ ಪಡೆಯಲಾಯಿತು.