ಬಂಟ್ವಾಳ: ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬಿಜೆಪಿ ಬಂಟ್ವಾಳ ಪುರಸಭೆ ಮಹಾಶಕ್ತಿಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ದೈಹಿಕ ಹಾಗೂ ಮಾನಸಿಕ ದೃಢತೆಗೆ ಯೋಗ ಸಹಕಾರಿಯಾಗುತ್ತದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆಯ ಮೂಲಕ ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು ಎಂಬ ತತ್ವದಡಿ ದೇಹಕ್ಷಮತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಯೋಗಗುರು ಡಾ. ರಘುವೀರ್ ಅವಧಾನಿ ತರಬೇತಿ ನಡೆಸಿಕೊಟ್ಟರು. ಪ್ರಣಾಮ್ ಅಜ್ಜಿಬೆಟ್ಟು ಪ್ರಾತ್ಯಕ್ಷಿಕೆ ನಡೆಸಿದರು. ಈ ಸಂದರ್ಭ ಪ್ರಮುಖರಾದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಸುಲೋಚನಾ ಜಿ.ಕೆ.ಭಟ್, ರಾಮದಾಸ ಬಂಟ್ವಾಳ, ಪ್ರಕಾಶ್ ಅಂಚನ್, ಡೊಂಬಯ ಅರಳ, ಕೇಶವ ದೈಪಲ, ಗುರುರಾಜ್, ಸತೀಶ್ ಶೆಟ್ಟಿ, ಮಹೇಶ್ ಶೆಟ್ಟಿ, ಶ್ರೀನಿವಾಸ ಪೂಜಾರಿ ಮೇಲ್ಕಾರ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಯೋಗಗುರುಗಳನ್ನು ಗೌರವಿಸಲಾಯಿತು.