ಬಂಟ್ವಾಳ: ನಿವೇಶನ ಇಲ್ಲದಿರುವ ಪರಿಶಿಷ್ಟ ಕುಟುಂಬಗಳಿಗೆ ಸರ್ವೇ ನಡೆಸಿ 6 ತಿಂಗಳಲ್ಲಿ ನಿವೇಶನ ಹಂಚುವ ಕಾರ್ಯ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಡಳಿತದ ೮ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಬಂಟ್ವಾಳ ಬಿಜೆಪಿ ಎಸ್‌ಸಿ ಮೋರ್ಚಾದ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಪರಿಶಿಷ್ಟ ಜಾತಿಯವರ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದರು.
ಪರಿಶಿಷ್ಟ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಕಂಡು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಂತೆ ತಲಾ 75 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದ್ದು, ಇದಕ್ಕೆ ಸಮಾಜ ಕಲ್ಯಾಣ ಇಲಾಖೆಗೆ 641 ಕೋ.ರೂ.ವೆಚ್ಚ ಭರಿಸಲಿದೆ ಎಂದರು.
ಕೇಂದ್ರವು ಸೇನೆಯಲ್ಲಿ ಯುವಕರಿಗೆ ಅವಕಾಶವನ್ನು ಪ್ರಕಟಿಸಿದರೆ ಅದನ್ನು ಸಹಿಸದವರು ಚರ್ಚೆಗೆ ಬರುವುದನ್ನು ಬಿಟ್ಟು ಪ್ರತಿಭಟನೆ ಮಾಡಿ ಪ್ರಯಾಣಿಕರಿರುವ ರೈಲಿಗೆ ಬೆಂಕಿ ಹಚ್ಚುವ ಹೀನ ಕೃತ್ಯ ಮಾಡಿದ್ದು, ಇಂತಹ ಕೃತ್ಯವನ್ನು ಸಮರ್ಥನೆ ಮಾಡುವವರು ನಮ್ಮಲ್ಲಿದ್ದಾರೆ. ದೇಶಕ್ಕೆ ಕೆಟ್ಟದ್ದು ಮಾಡುವವರ ಜತೆ ಕೈ ಜೋಡಿಸುವುದನ್ನು ಇಡೀ ದೇಶ ಖಂಡನೆ ಮಾಡಬೇಕಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಪ್ರತಿಯೊಬ್ಬರು ಕೂಡ ತಮ್ಮೊಳಗಿನ ಕೀಳರಿಮೆಯನ್ನು ಬಿಟ್ಟು ಸಮಾಜಕ್ಕೆ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಪರಿಶಿಷ್ಟರ ಸೌಲಭ್ಯಗಳ ಕುರಿತು ಅಧಿಕಾರಿಗಳ ಸಮ್ಮುಖದಲ್ಲಿ ಬಂಟ್ವಾಳದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮವೊಂದನ್ನು ಸಂಘಟಿಸುವಂತೆ ಸಚಿವರ ಬಳಿ ಮನವಿ ಮಾಡಿದರು. ಅದರಂತೆ ಜುಲೈ ಮೊದಲ ವಾರದಲ್ಲಿ ಇಲಾಖೆ ಕಾರ್ಯಕ್ರಮ ಆಯೋಜಿಸುವ ಭರವಸೆಯನ್ನು ಸಚಿವರು ನೀಡಿದರು.
ಬಂಟ್ವಾಳ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಕೇಶವ ದೈಪಲ ಅಧ್ಯಕ್ಷತೆ ವಹಿಸಿದ್ದರು. ಶಿವಪ್ರಸಾದ್ ಕೊಕ್ಕಡ ಅವರು ಮಾಹಿತಿ ನೀಡಿದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಮೋರ್ಚಾದ ಜಿಲ್ಲಾಧ್ಯಕ್ಷ ವಿನಯನೇತ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಿ ಏಳ್ತಿಮಾರ್, ಮೋರ್ಚಾದ ಪ್ರಭಾರಿ ರೊನಾಲ್ಡ್ ಡಿಸೋಜ ಉಪಸ್ಥಿತರಿದ್ದರು. ಈ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಕುದ್ರೆಬೆಟ್ಟು ಸ್ವಾಗತಿಸಿ, ವಿಶ್ವನಾಥ ಚಂಡ್ತಿಮಾರ್ ವಂದಿಸಿದರು. ಎಸ್.ಸಿ.ಮೋರ್ಚಾ ಸದಸ್ಯೆ ಹಾಗೂ ಕೊಳ್ನಾಡು ಗ್ರಾಪಂ ಸದಸ್ಯೆ ಸೌಮ್ಯಲತಾ ಕೊಳ್ನಾಡು ಕಾರ್ಯಕ್ರಮ ನಿರ್ವಹಿಸಿದರು.