ಬಂಟ್ವಾಳ: ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕಿನಲ್ಲಿ ಬಂದ ಆಗಂತುಕನೊಬ್ಬ ಸರ ಸೆಳೆದು ಪರಾರಿಯಾದ ಘಟನೆ ಕಾವಳಮುಡೂರು ಗ್ರಾಮದ ಹಂಚಿಕಟ್ಟೆ ಎಂಬಲ್ಲಿ ನಡೆದಿದೆ.
ಪೂವಮ್ಮ (69) ಎಂಬವರು ತಮ್ಮ ಸೊಸೆ ಮೋಹಿನಿ ಎಂಬವರೊಂದಿಗೆ ಕಾರ್ಯಕ್ರಮಕ್ಕೆ ಹೋಗುವ ನಿಮಿತ್ತ ತನ್ನ ತಮ್ಮನ ಮನೆಯ ಕಡೆಗೆ ಕಾವಳಪಡೂರು ಗ್ರಾಮದ ಹಂಚಿಕಟ್ಟೆ ಕಡೆಯಿಂದ ಸಾಲು ಮರದ ತಿಮ್ಮಕ್ಕ ಉದ್ಯಾನವನ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ, ಹಿಂದಿನಿಂದ ಮೋಟಾರ್ ಸೈಕಲ್ ಒಂದನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿ, ಮುಂದಕ್ಕೆ ಹೋಗಿ, ಬಳಿಕ ತಿರುಗಿಸಿ, ಇವರ ಕಡೆಗೆ ಬಂದು, ನಿಧಾನಿಸಿ, ಏಕಾಏಕಿಯಾಗಿ ಕುತ್ತಿಗೆಗೆ ಕೈ ಹಾಕಿ, ಪೂವಮ್ಮ ಧರಿಸಿದ್ದ ಚಿನ್ನದ ಒಪ್ಪ ಮಾಡಿದ ಅಂದಾಜು 1,200 ರೂ ಮೌಲ್ಯದ ಬೆಳ್ಳಿಯ ಸರಗಳನ್ನು ಸುಲಿಗೆ ಮಾಡಿ, ಬೈಕ್ ಸಮೇತ ಪರಾರಿಯಾಗಿದ್ದಾನೆ. ಘಟನೆ ಸಂದರ್ಭ ಪೂವಮ್ಮ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ನಂಬರ್ ಪ್ಲೇಟ್ ಇಲ್ಲದ, ಕಪ್ಪು ಬಣ್ಣದ ಬೈಕಿನಲ್ಲಿ ಆರೋಪಿ ಆಗಮಿಸಿದ್ದ ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.