ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಶಂಭೂರಿನಲ್ಲಿರುವ ಅರಣ್ಯ ಇಲಾಖೆ ನರ್ಸರಿಗೆ ಭೇಟಿ ನೀಡಿ ಈ ಸಾಲಿನಲ್ಲಿ ನಾಟಿಗೆ ಸಿದ್ಧಗೊಂಡಿರುವ ಗಿಡಗಳ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಖಾಲಿ ಜಾಗಗಳಲ್ಲಿ ಹೆಚ್ಚಿನ ಗಿಡಗಳ ನಾಟಿಗೆ ಮುಂದಾಗಬೇಕು. ತಮ್ಮ ಮಕ್ಕಳ ಹೆಸರಿನಲ್ಲಿ ಗಿಡಗಳನ್ನು ಬೆಳೆದಾಗ ಮಕ್ಕಳೇ ಅದರ ರಕ್ಷಣೆ ಮಾಡುತ್ತಾರೆ. ಬಂಟ್ವಾಳದಲ್ಲಿ ಈ ಬಾರಿ ೧೪೪ ಜಾತಿಯ ೧.೧೫ ಲಕ್ಷ ಗಿಡಗಳು ಸಿದ್ಧಗೊಂಡಿದ್ದು, ೫೫ ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ಹಂಚಲಾಗುತ್ತದೆ. ಉಳಿದವುಗಳನ್ನು ಅರಣ್ಯ ಇಲಾಖೆಯ ಜಾಗಳಲ್ಲಿ ನಾಟಿ ಮಾಡಲಾಗುತ್ತದೆ. ಇಲಾಖೆಯು ಪ್ರತಿವರ್ಷ ಗಿಡಗಳನ್ನು ನಾಟಿ ಮಾಡಿ ಅರಣ್ಯ ವೃದ್ಧಿಸುವ ಕಾರ್ಯ ಮಾಡುತ್ತಿದ್ದು, ಅರಣ್ಯ ಹೆಚ್ಚಾದಾಗಲೇ ಶುದ್ಧ ಗಾಳಿ ಸಿಗುತ್ತದೆ ಎಂದರು.
ನರಿಕೊಂಬು ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು, ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ಸುಜಾತ, ಸವಿತಾ, ಯೋಗೀಶ್, ರಂಜಿತ್ ಕೆದ್ದೇಲು, ಸಂತೋಷ್‌ಕುಮಾರ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಪ್ರಮುಖರಾದ ಆನಂದ ಶಂಭೂರು, ಗಣೇಶ್ ರೈ ಮಾಣಿ, ಸುಪ್ರೀತ್ ಆಳ್ವ, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಸಾಲ್ಯಾನ್, ಪ್ರೇಮನಾಥ ಶೆಟ್ಟಿ ಅಂತರ, ಮಾಧವ ಕರ್ಬೆಟ್ಟು, ಅರಣ್ಯ ರಕ್ಷಕರಾದ ಶೋಭಿತ್, ದಯಾನಂದ, ರವಿಕುಮಾರ್ , ಅನಿತಾ, ಸ್ಮಿತಾ, ರೇಖಾ, ಪ್ರವೀಣ್ ಉಪಸ್ಥಿತರಿದ್ದರು.