ಬಂಟ್ವಾಳ: ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನಿವೃತ್ತ ಉಪನ್ಯಾಸಕ ಹಾಗೂ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರಿಂದ ಅಧ್ಯಾತ್ಮ, ಅನುಭಾವ ಮತ್ತು ಆಚರಣೆ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಮಕಾಲೀನ ವಿದ್ಯಮಾನಗಳು ಹಾಗೂ ಸನ್ನಿವೇಶಗಳ ಸಂದರ್ಭ ಒಂದಕ್ಕೊಂದು ಮಿಳಿತವಾಗಬೇಕಿದ್ದ ಆಧ್ಯಾತ್ಮ, ಅನುಭಾವ ಮತ್ತು ಧರ್ಮ ಆಚರಣೆಗಳ ಸ್ವರೂಪಗಳು ಬದಲಾಗಿರುವ ಕುರಿತು ಕಲ್ಚಾರ್ ಸೂಕ್ಷ್ಮವಾಗಿ ತಿಳಿಸಿದರು.
ಕಾಂತಾವರದ ಅಲ್ಲಮಪ್ರಭು ಪೀಠ ವತಿಯಿಂದ ಅನುಭವದ ನಡೆ ಅನುಭಾವದ ನುಡಿ ತಿಂಗಳ ಉಪನ್ಯಾಸ ಮಾಲಿಕೆಯ ಅಂಗವಾಗಿ ಸುದರ್ಶನ ಮೊಗಸಾಲೆ ಮತ್ತು ದಿ.ನಂದಿಬಸಪ್ಪ ಚೌಳಹಿರಿಯೂರ ಅವರ ದತ್ತಿ ಉಪನ್ಯಾಸದ ಭಾಗವಾಗಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಸುಂದರ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಭಾಗವಹಿಸಿದ್ದರು. ಅಲ್ಲಮಪ್ರಭು ಪೀಠ ಕಾಂತಾವರದ ಸಂಚಾಲಕ ಕಲ್ಲೂರು ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಯತ್ರಿ ಗೀತಾ ಎಸ್.ಕೊಂಕೋಡಿ ಸ್ವಾಗತಿಸಿದರು. ಕಸಾಪ ತಾಲೂಕು ಕಾರ್ಯಕಾರಿ ಸದಸ್ಯ ಶಿವಪ್ಪ ಪೂಜಾರಿ ವಂದಿಸಿದರು. ಪತ್ರಕರ್ತ ಹರೀಶ ಮಾಂಬಾಡಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ನಡೆದ ಸಂವಾದ ಕಾರ್ಯಕ್ರಮದಲ್ಲಿ ಅಶೋಕ ಶೆಟ್ಟಿ ಸರಪಾಡಿ, ಜಯಾನಂದ ಪೆರಾಜೆ, ಕಸಾಪ ಉಳ್ಳಾಲ ಘಟಕಾಧ್ಯಕ್ಷ ಡಾ. ಧನಂಜಯ ಕುಂಬ್ಳೆ, ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಪಾಲ್ಗೊಂಡರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ವಿ.ಸು.ಭಟ್ ಉಪಸ್ಥಿತರಿದ್ದರು. ಅಬ್ಬಾಸ್ ಆಲಿ, ಜಯಾನಂದ ಪೆರಾಜೆ ಮತ್ತು ಗಣೇಶ ಪ್ರಸಾದ ಪಾಂಡೇಲು ಅತಿಥಿಗಳನ್ನು ಗೌರವಿಸಿದರು.