ಬಂಟ್ವಾಳ: ಬಂಟ್ವಾಳ ತಾಲೂಕು ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್(ಎಐಟಿಯುಸಿ) ಇದರ ೭೩ ನೇ ವಾರ್ಷಿಕ ಮಹಾಸಭೆ ಬಂಟ್ವಾಳದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಸಿಪಿಐ ದ.ಕ, ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ಆಡಳಿತ ನೀತಿಯ ಪರಿಣಾಮ ಜೀವನ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ತೀವ್ರ ಬೆಲೆ ಏರಿಕೆಯಿಂದಾಗಿ ಕಾರ್ಮಿಕರಲ್ಲಿ ಕೊಂಡುಕೊಳ್ಳುವ ಶಕ್ತಿ ಕಡಿಮೆಯಾಗಿ ಕಾರ್ಮಿಕರ ಬದಕು ದಿನದಿಂದ ದಿನಕೆ ದುಸ್ತರವಾಗುತ್ತಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ವಿ.ಸೀತಾರಾಮ ಬೇರಿಂಜ ಮುಖ್ಯ ಅತಿಥಿಯಾಗಿದ್ದರು. ಸಂಘದ ಅಧ್ಯಕ್ಷ ಬಿ.ಬಾಬು ಭಂಡಾರಿ ಮತ್ತು ರೈತ ಕಾರ್ಮಿಕ ಹಿರಿಯ ಮುಖಂಡ, ಯೋಗಪಟು ತನಿಯಪ್ಪ ಬಂಗೇರ ಅವರಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯೂನಿಯನ್‌ನ ಕಾರ್‍ಯದರ್ಶಿ ಬಿ.ಶೇಖರ್ ಸ್ವಾಗತಿಸಿದರು. ಕೋಶಾಧಿಕಾರಿ ಪ್ರೇಮನಾಥ ಕೆ. ಅವರು ಗತವರ್ಷದ ಲೆಕ್ಕ ಪತ್ರ ಮಂಡಿಸಿದರು. ಮುಂದಿನ ಒಂದು ವರ್ಷದ ಅವಧಿಗೆ ೩೧ ಜನರಿರುವ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿ ಬಿ.ಬಾಬು ಭಂಡಾರಿ ಅಧ್ಯಕ್ಷರು, ರತಿ.ಎಸ್.ಭಂಡಾರಿ, ಕೆ.ಜಯಂತ ಉಪಾಧ್ಯಕ್ಷರು, ಬಿ.ಶೇಖರ್ ಪ್ರಧಾನ ಕಾರ್‍ಯದರ್ಶಿ, ಹರ್ಷಿತ್ ,ಸರೋಜಿನಿ ಕುರಿಯಾಳ ಕೇಶವತಿ ಸಹಕಾರ್ಯದರ್ಶಿಗಳು, ಪ್ರೇಮನಾಥ್ ಕೆ. ಕೋಶಾಧಿಕಾರಿಯಾಗಿ ಆಯ್ಕೆಯಾದರು. ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ್ ಕುಮಾರ್, ಸಂಘದ ಸಹ ಕಾರ್ಯದರ್ಶಿಗಳಾದ ಸರೋಜಿನಿ ಮತ್ತು ಚಂದಪ್ಪ ನಾವೂರು, ಉಪಸ್ಥಿತರಿದ್ದರು. ಕೇಶವತಿ ಕಾರ್‍ಯಕ್ರಮ ಸಂಯೋಜಿಸಿದರು. ಪ್ರೇಮನಾಥ್ ಕೆ ವಂದನಾರ್ಪಣೆ ಗೈದರು.