ಬಂಟ್ವಾಳ: ಕಲ್ಲಡ್ಕ ಸಮೀಪ ಸುಧೆಕಾರು ಶ್ರೀ ರಕ್ತೇಶ್ವರಿ ಅಮ್ಮನವರ ಹಾಗೂ ಪರಿವಾರ ಗುಳಿಗ ದೈವಸ್ಥಾನದ ಮಹಾಕಲಶೋತ್ಸವ ಕಾರ್ಯಕ್ರಮಗಳು ಜೂನ್ 1ರಿಂದ 3ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಮತ್ತು ಮಹಾಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಸೋಮವಾರ ಸುಧೆಕಾರು ಕ್ಷೇತ್ರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ತಾಂಬೂಲ ಪ್ರಶ್ನೆಯಲ್ಲಿ ಶತಮಾನಗಳ ಹಿಂದೆ ಆರಾಧನೆ ಮಾಡುತ್ತಿದ್ದ ಜನರಿಗೆ ಕ್ಷೇಮ, ಸ್ಥೈರ್ಯವನ್ನು ಕೊಟ್ಟ ತಾಯಿ ರಕ್ತೇಶ್ವರಿಯ ಸ್ಥಾನ ಬರಡಾಗಿದೆ ಹಾಗೂ ಇದು ಸುಧೆಕಾರಿನ ಜಾಗದಲ್ಲಿದೆ ಎಂದು ತಿಳಿದುಬಂತು. ಈ ಸಂದರ್ಭ ಸ್ಥಳ ಪರಿಶೀಲಿಸಿದಾಗ 2 ಸಾಲು ಹಳೇ ಕಲ್ಲಿನ ಅಡಿಪಾಯ, 50 ಅಡಿ ಕೆಳಗೆ ಕೆರೆ, ಮೆಟ್ಟಲು ಕಂಡುಬಂತು, ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ ನಿರ್ದೇಶನದ ಮೇರೆಗೆ ಶ್ರೀ ರಕ್ತೇಶ್ವರಿ ಗುಳಿಗರಿಗೆ ಗುಡಿ ನಿರ್ಮಾಣ ಮಾಡಲಾಯಿತು ಎಂದು ವಿವರಿಸಿದರು. ಜೂನ್ 1ರಂದು ಬುಧವಾರ ಮಧ್ಯಾಹ್ನ ಕಲ್ಲಡ್ಕ ಶ್ರೀರಾಮ ಮಂದಿರದ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಸಂಜೆ 5ರಿಂದ ಪಳನೀರು ಶ್ರೀಪತಿ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುವುದು. 2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಜೆ 7ರಿಂದ ಯಕ್ಷಗಾನ ನಾಟ್ಯ ವೈಭವ ನಡೆಯಲಿದೆ. ಜೂನ್ 3ರ ಶುಕ್ರವಾರ ಬೆಳಗ್ಗೆ 8.10ರ ಮಿಥುನ ಲಗ್ನದಲ್ಲಿ ಶ್ರೀ ರಕ್ತೇಶ್ವರಿ ಅಮ್ಮನವರ ಮಂಚ ಪ್ರತಿಷ್ಠೆ, ಶ್ರೀ ಗುಳಿಗದೈವ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪಂಚಾಮೃತಾಭಿಷೇಕ, ಶಿಖರ ಪ್ರತಿಷ್ಠೆ, ಪರಿಕಲಶಾಭಿಷೇಕ, ಮಹಾಕಲಶಾಭಿಷೇಕ, ಪರ್ವಸೇವೆ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀಗಳು ಆಶೀರ್ವಚನ ನೀಡಲಿದ್ದು, ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸುವರು ಎಂದರು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಶ್ರೀ ರಕ್ತೇಶ್ವರಿ ಅಮ್ಮನವರ ನೇಮೋತ್ಸವ, ಗುಳಿಗ ದೈವದ ಕೋಲ ನಡೆಯುವುದು ಎಂದರು.,
ಸುದ್ದಿಗೋಷ್ಠಿಯಲ್ಲಿ ಮಹಾಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಪಿ.ಎಸ್, ಜೊತೆ ಕೋಶಾಧಿಕಾರಿ ಕ.ಕೃಷ್ಣಪ್ಪ ಕಲ್ಲಡ್ಕ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಗೋಪಾಲ ಶೆಣೈ ಕಂಟಿಕ, ಪ್ರಮುಖರಾದ ಜಯಾನಂದ ಆಚಾರ್ಯ, ಆರ್.ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಹಿರಣ್ಮಯಿ ಕಲ್ಲಡ್ಕ, ರಾಮಣ್ಣ ಶೆಟ್ಟಿ ಸುಧೆಕಾರು, ದಿವಾಕರ ಶೆಟ್ಟಿ, ಮುತ್ತಣ್ಣ ಶೆಟ್ಟಿ, ಆನಂದ ಶೆಟ್ಟಿ ಉಪಸ್ಥಿತರಿದ್ದರು.