ಬಂಟ್ವಾಳ: ಗ್ರಾಮಸ್ಥರ ಸಮಸ್ಯೆಗಳಿಗೆ ಗ್ರಾಮಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸರ್ಕಾರ ಗ್ರಾಮ ವಾಸ್ತವ್ಯ ವನ್ನುಆಯೋಜಿಸಿದ್ದು, ಪ್ರತೀ ತಾಲೂಕಿನಲ್ಲೂ ಉತ್ತಮಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾ ರಾಮು ಹೇಳಿದ್ದಾರೆ.
ಬಂಟ್ವಾಳ ತಾಲೂಕು ಆಡಳಿತ, ಕಂದಾಯ ಇಲಾಖೆ ಹಾಗೂ ಅನಂತಾಡಿ ಗ್ರಾ.ಪಂ. ಆಶ್ರಯದಲ್ಲಿ ಬಾಬನಕಟ್ಟೆ ಶಾಲೆಯಲ್ಲಿ ಶನಿವಾರ ನಡೆದ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹರಿಸುವುದು ಹಾಗೂ ಇಲಾಖೆ ಮತ್ತು ಗ್ರಾಮಸ್ಥರ ಅಂತರವನ್ನು ಕಡಿಮೆ ಮಾಡುವುದು ಇದರ ಆಶಯ ಎಂದವರು ಹೇಳಿದರು.
30 ಅರ್ಜಿ ಸ್ವೀಕೃತಿ: ಅರ್ಜಿದಾರರ ಕೋರಿಕೆ ಈಡೇರಿಸಿ ವಿಲೇ ಆದ ಅರ್ಜಿಗಳ ಸಂಖ್ಯೆ 8, ಈಡೇರಿಸದೆ ವಿಲೇ ಆದ ಅರ್ಜಿಗಳು 22, ಬಾಕಿ ಇರುವ ಅರ್ಜಿಗಳು 22. ಕಂದಾಯ ಇಲಾಖೆಗೆ ಸಂಬಂಧಿಸಿದ 21 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 8 ಅರ್ಜಿಗಳು ವಿಲೇ ಆಗಿದ್ದು, ಉಳಿದ 13 ಅರ್ಜಿಗಳು ತನಿಖಾ ಹಂತದಲ್ಲಿವೆ. ಗ್ರಾಪಂ ಅರ್ಜಿಗಳು 7, ಮೆಸ್ಕಾಂ 1, ಸರ್ವೆ ಇಲಾಖೆ 1, ಆರ್.ಟಿ.ಸಿ. 1, ಎಸ್.ಎಸ್.ವೈ. 2, ಡಿಡಬ್ಲ್ಯುಪಿಯದ್ದು 1, ಒಎಪಿಯ 4, ಕಂದಾಯ ಇಲಾಖೆಗೆ ಸಂಬಂಧಿಸಿದ 13 ಅರ್ಜಿಗಳು ತನಿಖಾ ಹಂತದಲ್ಲಿವೆ .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ವಹಿಸಿದ್ದರು. ಅನಂತಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮ್ಮ ಪಂಚಾಯತ್ ಗೆ ಹೆಮ್ಮೆಯ ವಿಷಯವಾಗಿದ್ದು, ಗ್ರಾಮದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುವ ಆಶಯವಿದೆ ಎಂದರು. ಗ್ರಾ.ಪಂ.ಉಪಾಧ್ಯಕ್ಷ ಕುಸುಮಾಧರ, ತಾ.ಹಿಂದುಳಿದ ವರ್ಗಗಳ ಅಭಿವೃದ್ಧಿ ಅಧಿಕಾರಿ ಬಿಂದಿಯಾ ನಾಯಕ್, ಪಿಡಿಓ ಅಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೇಂದ್ರ ಸ್ಥಾನಿಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು, ಪ್ರಥಮ ದರ್ಜೆ ಸಹಾಯಕಿ ಗ್ರೆಟ್ಟಾ ಮಸ್ಕರೇಜಸ್, ಗ್ರಾಮಲೆಕ್ಕಾಧಿಕಾರಿ ವೈಶಾಲಿ ಹಾಜರಿದ್ದರು. ವಿಟ್ಲ ಉಪತಹಶೀಲ್ದಾರ್ ವಿಜಯ ವಿಕ್ರಮ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಪ್ರಶಾಂತ್ ವಂದಿಸಿದರು. ಗ್ರಾಮಕರಣಿಕ ಅನಿಲ್ ಕುಮಾರ್ ವಂದಿಸಿದರು.