ಬಂಟ್ವಾಳ: ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಆಶ್ರಯದಲ್ಲಿ ಜಿಲ್ಲಾ ಭೂಮಾಪನ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನಡೆಯಿತು.
ಪ್ರಧಾನ ಅತಿಥಿಯಾಗಿ ಮೈಸೂರು ವಿಭಾಗದ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕ ಪ್ರಸಾದ್ ವಿ.ಕುಲಕರ್ಣಿ ಮಾತನಾಡಿ, ಭೂಮಾಪನ ಇಲಾಖೆ ಸಿಬಂದಿ ಬಿಡುವಿಲ್ಲದ ಬದುಕಿನಲ್ಲಿಯೂ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಶ್ರಮ ವಹಿಸಿದ್ದು ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕ ನಿರಂಜನ್ ಎಂ.ಎನ್. ವಹಿಸಿದ್ದರು. ಅವರು ಪ್ರತಿಭಾ ಪುರಸ್ಕಾರ ಕಾರ್ಯ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ವಿವಿಧ ತಾಲೂಕುಗಳ ಸಹಾಯಕ ನಿರ್ದೇಶಕರಾದ ಬೆಳ್ತಂಗಡಿಯ ರೇಣುಕಾ ನಾಯಕ್ ಟಿ, ಸುಳ್ಯದ ವೆಂಕಟೇಶ್ ಆರ್, ಪುತ್ತೂರಿನ ಕೆ.ಎಸ್.ರಮಾದೇವಿ, ಮಂಗಳೂರಿನ ಗೋಪಾಲ ಎಂ.ಎನ್, ಯುಪಿಒಆರ್ ವಿಚಾರಣಾಧಿಕಾರಿ ನಿಸಾರ್ ಅಹಮದ್ ಅತಿಥಿಗಳಾಗಿ ಭಾಗವಹಿಸಿದ್ದರು.
ಜಗದೀಶ ಹೊಳ್ಳ ಪ್ರಾರ್ಥಿಸಿದರು. ಮಂಗಳೂರು ಯುಪಿಒಆರ್ ಸರ್ವೇಯರ್ ಮಹೇಂದ್ರ ಕೊಟ್ಟಾರಿ ಸ್ವಾಗತಿಸಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಸೋಮಾರಾಧ್ಯ ಕೆ.ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯ ಭೂಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ಸಂಘದ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಆನಂದ ಕುಮಾರ್ ಕೆ, ದ.ಕ.ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿ.ಎಂ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.