ಪಂಜಿಕಲ್ಲು ಗ್ರಾಮದ ಮುಕುಡ ಎಂಬಲ್ಲಿ ಖಾಸಗಿ ಜಮೀನೊಂದರಲ್ಲಿ ತೆರೆದ ಕೊಳವೆಬಾವಿಯೊಂದು ಅಪಾಯಕಾರಿ ಸ್ಥಿತಿಯಲ್ಲಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅದನ್ನು ಪಂಜಿಕಲ್ಲು ಪಿಡಿಒ ನೇತೃತ್ವದಲ್ಲಿ ಮುಚ್ಚುವ ಕಾರ್ಯವನ್ನು ಮಂಗಳವಾರ ನಡೆಸಲಾಯಿತು.
ಕೊಳವೆಬಾವಿಯನ್ನು ಮುಚ್ಚದೆ ಇದ್ದಲ್ಲಿ ಮುಂದಿನ ಮಳೆಗಾಲದ ದಿನಗಳಲ್ಲಿ ಮಳೆ ನೀರು ಹರಿದು, ಮಣ್ಣಿನ ಮೇಲ್ಭಾಗದ ಹೊಂಡವು ಇನ್ನೂ ದೊಡ್ಡದಾಗುವ ಸಾಧ್ಯತೆ ಇದ್ದು, ಇನ್ನೂ ಅಪಾಯಕಾರಿಯಾಗುವ ಸಾಧ್ಯತೆ ಇರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ದೂರಿನನ್ವಯ ಜಾಗದ ಮಾಲೀಕರನ್ನು ಸಂಪರ್ಕಿಸಿ ಎಚ್ಚರಿಕೆ ನೀಡಿದಾಗ, ಮಂಗಳೂರಿನಲ್ಲಿರುವ ಅವರು ಅನಾರೋಗ್ಯ ಮತ್ತು ಮನೆಯಲ್ಲಿ ಮರಣ ಸಂಭವಿಸಿದ ಹಿನ್ನೆಲೆಯಲ್ಲಿ ಮುಚ್ಚಿಸುವ ಕಾರ್ಯ ನಡೆಸಲು ವಿಳಂಬವಾಗುತ್ತಿರುವ ಕುರಿತು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತೆರೆದ ಕೊಳವೆ ಬಾವಿಯನ್ನು ಹಾಗೆಯೇ ಬಿಡುವುದರಿಂದ ಸಂಭವನೀಯ ಅಪಾಯಗಳಾಗುವ ಕುರಿತ ದೂರಿನ ಅನ್ವಯ, ಮಂಗಳವಾರ ಪಿಡಿಒ ವಿದ್ಯಾಶ್ರೀ ನೇತೃತ್ವದಲ್ಲಿ ಗ್ರಾಮ ಕರಣಿಕರಾದ ಕುಮಾರ್ ಟಿ.ಸಿ. ಗ್ರಾಪಂ ಸಿಬ್ಬಂದಿ ಜತೆ ಪೊಲೀಸ್ ಸಹಾಯದಿಂದ ಜಮೀನಿಗೆ ತೆರಳಿ, ಪರಿಶೀಲನೆ ನಡೆಸಲಾಯಿತು. ಈ ಸಂದರ್ಭ ಮೇಲ್ನೋಟಕ್ಕೆ ಕೊಳವೆ ಬಾವಿ ಮುಚ್ಚಿದಂತೆ ಕಂಡುಬಂದಿದ್ದರೂ ಮೇಲೆ ಒಂದು ಮುರಕಲ್ಲು ಹಾಕಿ ಅದರ ಮೇಲೆ ಬಂಡೆಕಲ್ಲಿನ ಹುಡಿ ಮಾತ್ರ ಹಾಕಿದ್ದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಕೆಂಪುಕಲ್ಲು ಹೊರತೆಗೆದು, ವಿಫಲ ಕೊಳವೆಬಾವಿಯ ಒಳಗೆ ಕಲ್ಲು ಮತ್ತು ಬಂಡೆಕಲ್ಲಿನ ಹುಡಿಯನ್ನು ತುಂಬಿಸಿ, ಕೊಳವೆಬಾವಿಯನ್ನು ಮುಚ್ಚಿಸಲಾಯಿತು.