ಜಿಲ್ಲಾ ಸುದ್ದಿ

ಶಾಲಾರಂಭದ ದಿನವೇ ಕಾಡಿದ ಮಳೆ – ಮುಂದಿನ ಮೂರು ದಿನ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ

ತಗ್ಗುಪ್ರದೇಶ, ಬೀಚ್, ಕೆರೆ ಬದಿ ತೆರಳದಂತೆ ಸೂಚನೆ

ಕಲ್ಲಡ್ಕದ ಇಂದಿನ ದೃಶ್ಯ: ಚಿತ್ರ – ವರುಣ್ ಸ್ಟುಡಿಯೋ ಕಲ್ಲಡ್ಕ

ಮಂಗಳೂರು: ಶಾಲಾರಂಭದ ದಿನವೇ ಮಕ್ಕಳನ್ನು ಮಳೆ ಕಾಡಿದೆ. ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಕರ್ನಾಟಕ ಕರಾವಳಿ ಭಾಗದಲ್ಲಿ ಭಾರಿ ಮಳೆ ಇನ್ನೂ ಇದೆ. ಮೇ 17 ಮತ್ತು 19ರಂದು ಆರೆಂಜ್ ಅಲರ್ಟ್ ಮತ್ತು 18ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಪ್ರತಿದಿನ ತಲಾ 100 ಮಿ.ಮೀನಿಂದ 150 ಮಿ.ಮೀ.ಗೂ ಮೇಲ್ಪಟ್ಟು ಮಳೆಯಾಗುವ ಸಾಧ್ಯತೆ ಇದೆ.  ಮುಂದಿನ ಮೂರು ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು.

ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಬೇಕು. ಪ್ರವಾಸಿಗರು, ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೂಚನೆ ಹೊರಡಿಸಿದ್ದಾರೆ.

ಜಾಹೀರಾತು

ಬಂಟ್ವಾಳ ತಾಲೂಕಿನಾದ್ಯಂತ ಬೆಳಗ್ಗೆ ಹನಿಮಳೆ ಇದ್ದರೆ, ಮಧ್ಯಾಹ್ನದ ಬಳಿಕ ಬಿ.ಸಿ.ರೋಡ್ ಸಹಿತ ಹಲವೆಡೆ ಧಾರಾಕಾರ ಮಳೆ ಸುರಿಯುತು. ಪೇಟೆಯಿಡೀ ಕೃತಕ ನೆರೆಯಿಂದ ಕೆಸರುಮಿಶ್ರಿತ ನೀರಿನಿಂದ ಆವೃತವಾದರೆ, ರಸ್ತೆಯಂಚಿನಲ್ಲಿ ನಿಲ್ಲಲೂ ಆಗದ ಸ್ಥಿತಿ ನಿರ್ಮಾಣಗೊಂಡಿತು. ಇದರಿಂದ ಶಾಲೆ ಬಿಟ್ಟು ಮನೆಗೆ ತೆರಳುವ ಮಕ್ಕಳು ಪರದಾಟ ಅನುಭವಿಸಬೇಕಾಯಿತು. ಬಿ.ಸಿ.ರೋಡಿನ ಕೈಕಂಬದಿಂದ ಪೊಳಲಿ ಕಡೆಗೆ ತಿರುಗುವ ಜಾಗದಲ್ಲಿ ರಸ್ತೆಯೇ ಕಾಣಸಿಗಿಲ್ಲ. ಚರಂಡಿಗಳು ಸಂಪೂರ್ಣ ಹೂಳೆತ್ತದ ಕಾರಣ ಸಮಸ್ಯೆ ಅನುಭವಿಸಬೇಕಾಯಿತು. ಅದೇ ರೀತಿ ಹಲವು ವಸತಿ ಬಡಾವಣೆಗಳಲ್ಲೂ ಪುರಸಭೆಯ ಚರಂಡಿ ಹೂಳೆತ್ತದ ಪರಿಣಾಮ ರಸ್ತೆಯಲ್ಲಿಡೀ ನೀರು ಹರಿದಿದೆ.

ಸೋಮವಾರ ಸುರಿದ ಭಾರಿ ಮಳೆಗೆ ವಿಟ್ಲ ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆಯಾದ ಘಟನೆ ನಡೆಯಿತು. ವಿಟ್ಲ-ಮಂಗಳೂರು ರಸ್ತೆಯಲ್ಲಿ ಕೃತಕ ಪ್ರವಾಹದಿಂದ ವಾಹನ ಚಾಲಕ ಮಾಲಕರು ದ್ವಿಚಕ್ರ ಸವಾರರು, ಪಾದಚಾರಿಗಳು ಪರದಾಡುವಂತಾಯಿತು.

ಪಾಣೆಮಂಗಳೂರು ನರಿಕೊಂಬು ಮಧ್ಯೆ ಮೊಗರ್ನಾಡಿನಲ್ಲಿ ಸೋಮವಾರ ರಾತ್ರಿ ಬೃಹತ್ ಮರವೊಂದು ರಸ್ತೆಗೆ ಉರುಳಿದೆ. ಪರಿಣಾಮ ನರಿಕೊಂಬು ಪಾಣೆಮಂಗಳೂರು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನರಿಕೊಂಬಿಗೆ ಹೆದ್ದಾರಿಯಿಂದ ತೆರಳುವವರು ಪರ್ಯಾಯ ರಸ್ತೆಯನ್ನು ಅವಲಂಬಿಸಬೇಕಾಯಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts