FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ಬಂಟ್ವಾಳ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಶ್ಮಿ ಎಸ್.ಆರ್. ಅವರು ಮಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ತಾಲೂಕು ಆಡಳಿತದ ಪರವಾಗಿ ಬಂಟ್ವಾಳ ಕಂದಾಯ ಇಲಾಖೆಯ ಸಿಬ್ಬಂದಿಗಳಿಂದ ಶಾಲು , ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಿ.ಸಿ.ರೋಡಿನಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಮದನ್ ಮೋಹನ್ ರವರು ತಹಸೀಲ್ದಾರ್ ರಶ್ಮಿ.ಎಸ್.ಆರ್. ಬಂಟ್ವಾಳದಲ್ಲಿ ಜನಾನುರಾಗಿಯಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿ ಯಶಸ್ವಿಯಾದಂತೆ ಮುಂದಿನ ತಮ್ಮ ಇಲಾಖೆಯಲ್ಲೂ ಜಿಲ್ಲಾಮಟ್ಟದಲ್ಲಿ ಅವರ ಕರ್ತವ್ಯ ದಕ್ಷತೆಗೆ ಶ್ರೇಯಸ್ಸು ಲಭಿಸಲಿ ಎಂದು ಹಾರೈಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಉಮಾನಾಥ ರೈ ಮೇರಾವು, ಮೂಡಬಿದರೆಯ ಉಪತಹಸೀಲ್ದಾರ್ ರಾಮ ಕಾಟಿಪಳ್ಳ, ಸಹೋದ್ಯೋಗಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕಚೇರಿ ಸಿಬ್ಬಂದಿಗಳು, ಗ್ರಾಮ ಸಹಾಯಕರು ತಹಸೀಲ್ದಾರರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ದಿವಾಕರ ಮುಗುಳಿಯ ಕಂದಾಯ ನಿರೀಕ್ಷಕರಾದ ಸಂತೋಷ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ಕೇಂದ್ರ ಸ್ಥಾನಿಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು ಸ್ವಾಗತಿಸಿದರು. ವಿಟ್ಲ ಹೋಬಳಿ ಕಂದಾಯ ನಿರೀಕ್ಷಕರಾದ ಪ್ರಶಾಂತ್ ಶೆಟ್ಟಿ ಧನ್ಯವಾದ ಸಲ್ಲಿಸಿದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.