FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ತುಳುನಾಡು ಧರ್ಮದ ನಾಡು ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದು, ಧರ್ಮ ಶ್ರದ್ಧೆಯಲ್ಲಿ ಉಳಿಕೆ ಮಾಡಿದಾಗ ಧರ್ಮದ ಪ್ರೀತಿ ನಮ್ಮನ್ನು ಮುಂದೆ ನಡೆಸುತ್ತದೆ. ಜನರ ಜತೆಗೆ ಇರುವ ಶಾಸಕರಾಗಿ ರಾಜೇಶ್ ನಾಯ್ಕ್ ಗುರುತಿಸಿಕೊಂಡಿರುವುದು ಬಂಟ್ವಾಳ ಕ್ಷೇತ್ರದ ಜನತೆಯ ಹೆಗ್ಗಳಿಕೆಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಸಜೀಪಮೂಡ ಗ್ರಾಮದ ನಗ್ರಿಗುತ್ತು ದೈವಸ್ಥಾನದ ಬಳಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅನುದಾನದ ಮೂಲಕ 30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ತಡೆಗೋಡೆ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ತಡೆಗೋಡೆಯನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಯಾವುದೇ ಗ್ರಾಮದ ಅಭಿವೃದ್ಧಿಗೆ ಕುರಿತು ಊರಿನ ಜನತೆ ಇಚ್ಛಾಶಕ್ತಿ ಪ್ರದರ್ಶಿಸಿದರೆ ಯಾವುದೇ ಕೆಲಸ ಕಷ್ಟವಲ್ಲ. ಬಂಟ್ವಾಳದ 200ಕ್ಕೂ ಅಧಿಕ ಧಾರ್ಮಿಕ ಕ್ಷೇತ್ರಗಳ ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ ನೀಡಲಾಗಿದೆ. ನಂದಾವರ ದೇವಸ್ಥಾನಕ್ಕೆ ನೇತ್ರಾವತಿ ಕಿನಾರೆಯಲ್ಲಿ ಸೇತುವೆ ಸಹಿತ ರಸ್ತೆಯ ಸಂಪರ್ಕದ ಯೋಜನೆಗೆ 10 ಕೋ.ರೂ.ಮಂಜೂರಾಗಿ ಟೆಂಡರ್ ಹಂತದಲ್ಲಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ವೇದಿಕೆಯಲ್ಲಿ ಸಜೀಪಮಾಗಣೆಯ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಸಜೀಪಗುತ್ತಿನ ಗಡಿಪ್ರಧಾನರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ, ಗುತ್ತಿನ ಹಿರಿಯರಾದ ಜಯರಾಮ ಶೆಟ್ಟಿ ನಗ್ರಿಗುತ್ತು ಉಪಸ್ಥಿತರಿದ್ದರು.
ಈ ಸಂದರ್ಭ ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿಗುತ್ತು ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ 1200 ಕೋ.ರೂ.ಗಳ ಅಭಿವೃದ್ಧಿ ಕಾಮಗಾರಿ ನಡೆದಿದ್ದು, 180ಕ್ಕೂ ಅಧಿಕ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೊಂಡಿದೆ. ಕ್ಷೇತ್ರದ ಅಭಿವೃದ್ಧಿಯ ಕುರಿತು ವಿಶೇಷ ಕಾಳಜಿ ಹೊಂದಿರುವ ಶಾಸಕ ರಾಜೇಶ್ ನಾಯ್ಕ್ ಅವರ ಪ್ರಯತ್ನದ ಫಲವಾಗಿ ನಗ್ರಿಗುತ್ತಿಗೆ ತಡೆಗೋಡೆ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗ್ರಿಗುತ್ತಿನ ಪರವಾಗಿ ಶಾಸಕ ರಾಜೇಶ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಗುತ್ತಿಗೆದಾರರ ಧೀರಜ್ ನಾಯ್ಕ್ ಹಾಗೂ ಮೇಲ್ವಿಚಾರಕ ದಿನೇಶ್ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ರೋಹಿತ್ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿದರು. ಕೃಷ್ಣ ಶೆಟ್ಟಿ ನಗ್ರಿಗುತ್ತು ವಂದಿಸಿದರು. ಶಿಕ್ಷಕ ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.