FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ಬಂಟ್ವಾಳ ತಾಲೂಕು ಪಂಚಾಯಿತಿ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಜಯಂತಿ ಆಚರಣೆ ಗುರುವಾರ ನಡೆದಿದ್ದು, ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕಾವಳಪಡೂರು ಗ್ರಾಮದ ದಲಿತ ಕಾಲೊನಿಗೆ ಭೇಟಿ ನೀಡಿ ಅಲ್ಲಿ 13 ಕುಟುಂಬಗಳಿಗೆ 94ಸಿ ಹಕ್ಕುಪತ್ರ ವಿತರಿಸಿದರು. ಈ ಸಂದರ್ಭ ಆ ಭಾಗದ ಬೇಡಿಕೆಯಾದ ರಸ್ತೆ, ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಭರವಸೆಯನ್ನು ಶಾಸಕರು ನೀಡಿದರು.
ಇದಕ್ಕೂ ಮುನ್ನ ಬಂಟ್ವಾಳ ತಾಲೂಕು ಅಡಳಿತ , ತಾಲೂಕು ಪಂಚಾಯತ್ , ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಬಂಟ್ವಾಳ ಆಶ್ರಯದಲ್ಲಿ ಸಂವಿಧಾನಶಿಲ್ಪಿ ಭಾರತ ರತ್ನ ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಆಚರಣೆಗಳಲ್ಲಿ ಸಮಾಜಕ್ಕೆ ಸಹಾಯವಾಗುವಂತಹ ಕಾರ್ಯಕ್ರಮ ಮಾಡಿದಾಗ ಅದು ಮುಂದಿನ ಪೀಳಿಗೆಗೆ ಬದಲಾವಣೆಗಳನ್ನು ಮಾಡಲು ಸಾಧ್ಯವಾಗಬಹುದು ಎಂದರು.
ಉಪನ್ಯಾಸಕ ರುಕ್ಮಯ ಎಂ.ಕಕ್ಯಪದವು ಮಾತನಾಡಿ, ಮಹಿಳೆಯರ ಹಕ್ಕುಗಳಿಗೆ ಮೊತ್ತಮೊದಲ ಬಾರಿ ಪ್ರಜಾಸತ್ತಾತ್ಮಕವಾಗಿ ದನಿ ಎತ್ತಿದ ಅಂಬೇಡ್ಕರ್, ಶೋಷಿತರ ಏಳಿಗೆಗಾಗಿ ತಮ್ಮ ನಿರ್ಧಾರಕ್ಕೆ ಕಟಿಬದ್ಧರಾಗಿದ್ದರು ಎಂದು ಉದಾಹರಣೆಗಳೊಂದಿಗೆ ತಿಳಿಸಿದರು. ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಉಪಸ್ಥಿತರಿದ್ದರು. ಸಮಾಜ ಕಲ್ಯಾಣಾಧಿಕಾರಿ ಜಯಶ್ರೀ ಸ್ವಾಗತಿಸಿದರು. ಭವ್ಯಾ ವಂದಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದಿಯಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭ ಶಾಸಕರು ಕಾವಳಪಡೂರಿನ ದಲಿತ ಕಾಲೊನಿಗೆ ತೆರಳಿ ಅಲ್ಲಿ 13 ಜನರಿಗೆ 94 ಸಿ ಹಕ್ಕುಪತ್ರ ವಿತರಿಸಿದರು. ಈ ಸಂದರ್ಭ ಮಾತನಾಡಿದ ಪ್ರಮುಖರಾದ ಪ್ರಮೋದ್ ಕುಮಾರ್ ರೈ, ಕೇವಲ ಮೂರು ದಿನದಲ್ಲಿ ಹಕ್ಕು ಪತ್ರ ನೀಡುವ ಕೆಲಸ ಆಗಿದೆ, ಶಾಸಕರ ಇಚ್ಚಾಶಕ್ತಿಗೆ ಇದು ಸಾಕ್ಷಿಯಾಗಿದೆ. ಈ 13 ಕುಟುಂಬ ಗಳ ಹಕ್ಕು ಪತ್ರಕ್ಕೆ ಸರಕಾರಕ್ಕೆ ಪಾವತಿಸುವ ಮೊತ್ತವನ್ನು ಕೂಡ ಸ್ವತಃ ಶಾಸಕರೇ ಪಾವತಿಸಿ ಸಕಾಲಕ್ಕೆ ಹಕ್ಕು ಸಿಗುವಲ್ಲಿ ಶ್ರಮಿಸಿದ್ದಾರೆ ಎಂದರು. ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ರಜನಿ, ಉಪಾಧ್ಯಕ್ಷೆ ವಸಂತಿ, ಸದಸ್ಯರಾದ ಭವಾನಿ ಶ್ರೀಧರ್ ಪೂಜಾರಿ, ಉಮೇಶ್, ಮಾಜಿ ಪಂಚಾಯಿತಿ ಸದಸ್ಯರಾದ ಆನಂದ ,ಪ್ರಮುಖರಾದ ಸತೀಶ್ ಶೆಟ್ಟಿ, ವಿಶ್ವನಾಥ್ ಚೆಂಡ್ತಿಮಾರ್, ಯಶವಂತ ನಗ್ರಿ, ಶಿವಪ್ಪ ಗೌಡ ನಿನ್ನಕಲ್ಲು, ಸತೀಶ್ ಕುಲಾಲ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಕರಣಿಕೆ ಆಶಾ ಮೆಹಂದಲೆ, ಪಿ.ಡಿ.ಒ ಪಂಕಜಾ ಮತ್ತಿತರರು ಉಪಸ್ಥಿತರಿದ್ದರು.