www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಕನ್ನಡದಲ್ಲಿ ಮಕ್ಕಳ ಸಾಹಿತ್ಯ: ಮೌಲ್ಯಗಳ ವಿವೇಚನೆ ವಿಷಯದಲ್ಲಿ ಬಂಟ್ವಾಳ ತಾಲೂಕಿನ ಪದ್ಯಾಣದವರಾಗಿರುವ ಉಜಿರೆಯ ಎಸ್.ಡಿ.ಎಂ. ಬಿ.ಎಡ್ ಕಾಲೇಜಿನ ಉಪನ್ಯಾಸಕ ಪ್ರವೀಣ ಪದ್ಯಾಣ ಅವರು ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ಮಾಧವ ಎಂ. ಕೆ. ಅವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿವಿಯು ಡಾಕ್ಟರೇಟ್ ಪದವಿ ನೀಡಿದೆ.
ಇವರು ನಿವೃತ್ತ ಮುಖ್ಯೋಪಾಧ್ಯಾಯ ಬಂಟ್ವಾಳ ತಾಲೂಕಿನ ಪದ್ಯಾಣ ತಿಮ್ಮಣ್ಣ ಭಟ್ ಮತ್ತು ಈಶ್ವರಿ ದಂಪತಿಯ ದ್ವಿತೀಯ ಪುತ್ರ. ಕಾಸರಗೋಡಿನಲ್ಲಿ ಕನ್ನಡ ಪತ್ರಿಕೋದ್ಯಮ ಇವರ ಪ್ರಕಟಿತ ಕೃತಿ. ಜಾನಪದ ತಜ್ಞ ಹಂಪಿ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ವಿ. ನಾವಡ ಅವರ ಮಾರ್ಗದರ್ಶನದಲ್ಲಿ ಪುರಂದರದಾಸರ ಪ್ರತಿಮಾ ಜಗತ್ತು ವಿಷಯದಲ್ಲಿ ಎಂ.ಫಿಲ್ ಪದವಿ ಪಡೆದಿರುವ ಇವರು ಟಿಇಟಿ, ರಾಷ್ಟ್ರೀಯ ಶಿಕ್ಷಣ ನೀತಿ ಮೊದಲಾದ ವಿಷಯಗಳಲ್ಲಿ ಹಲವಾರು ತರಬೇತಿ, ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧ ಮಂಡನೆಯನ್ನೂ ಮಾಡಿರುತ್ತಾರೆ. ಮಕ್ಕಳ ಸಾಹಿತ್ಯ, ಪತ್ರಿಕೋದ್ಯಮ, ಯಕ್ಷಗಾನ, ಸಂಶೋಧನೆ ಇವರ ಆಸಕ್ತಿಯ ಕ್ಷೇತ್ರಗಳು.