www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ರಾಜ್ಯದ 41 ಸರ್ಕಾರಿ ಆಸ್ಪತ್ರೆಗಳ ಪೈಕಿ ಬಂಟ್ವಾಳವೂ ಟೆಲಿ ಐಸಿಯು ವ್ಯವಸ್ಥೆಯನ್ನು ಹೊಂದಿರುವ ಸರ್ಕಾರಿ ಆಸ್ಪತ್ರೆಯಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ 1.66 ಕೋಟಿ ರೂ ವೆಚ್ಚದಲ್ಲಿ ಒದಗಿಸಲಾದ 25 ಐಸಿಯು ಬೆಡ್ ಗಳು ಹಾಗೂ ಸುಸಜ್ಜಿತ ಐಸಿಯು ವಾರ್ಡ್ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾದ ರೋಗಿಯನ್ನು ಅಗತ್ಯವಿದ್ದರೆ, ಟೆಲಿ ವ್ಯವಸ್ಥೆ ಮೂಲಕ ಚಿಕಿತ್ಸೆ ಸಲಹೆ ಪಡೆದು ಚಿಕಿತ್ಸೆ ನೀಡುವ ಸುಧಾರಿತ ವ್ಯವಸ್ಥೆಯನ್ನು ಕಲ್ಪಿಸುವ ಟೆಲಿ ಐಸಿಯು ವ್ಯವಸ್ಥೆ ದ.ಕ.ಜಿಲ್ಲೆಯಲ್ಲಿ ಬಂಟ್ವಾಳಕ್ಕೆ ದೊರಕಿದೆ. ಇದಲ್ಲದೆ, ನೂರು ಬೆಡ್ ಗಳ ಸರ್ಕಾರಿ ಆಸ್ಪತ್ರೆಯಲ್ಲಿ 25 ಹೆಚ್ಚುವರಿ ಐಸಿಯು ಬೆಡ್ ಗಳನ್ನು ಒದಗಿಸಲಾಗಿದೆ, ಈ ಮೊದಲು ಬಂಟ್ವಾಳದಲ್ಲಿ 3 ಐಸಿಯು ಬೆಡ್ ಗಳು ಮಾತ್ರ ಇತ್ತು ಎಂದರು. ಸರ್ಕಾರಿ ಆಸ್ಪತ್ರೆಯಲ್ಲಿ 7 ಡಯಾಲಿಸಿಸ್ ಘಟಕಗಳಿದ್ದು, ದಿನವೊಂದಕ್ಕೆ 35 ಮಂದಿಗೆ ಡಯಾಲಿಸಿಸ್ ನಡೆಯುತ್ತಿದೆ. ಶವಶೈತ್ಯಾಗಾರ ಸಹಿತ ವಿವಿಧ ಮೂಲಸೌಕರ್ಯಗಳು ಇವೆ ಎಂದು ಶಾಸಕರು ಹೇಳಿದರು.
ಅಮೃತ್ ಆರೋಗ್ಯ ಯೋಜನೆಯಡಿ ಬಂಟ್ವಾಳ ತಾಲೂಕಿಗೆ 1 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಬೆಂಜನಪದವು, ರಾಯಿ, ನಾವೂರು ದೈವಸ್ಥಳ ಹಾಗೂ ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ತಲಾ 20 ಲಕ್ಷ ರೂ ನಂತೆ ಒಟ್ಟು 1 ಕೋಟಿ ರೂ ಅನುದಾನಬಿಡುಗಡೆಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ, ತಾಲೂಕು ಆರೋಗ್ಯಾಧಿಕಾರಿ ಡಾ. ಜಯಪ್ರಕಾಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಇ.ಪಿ.ಶೆಟ್ಟಿ, ಪುರಸಭೆ ಸದಸ್ಯ ಹರಿಪ್ರಸಾದ್, ಪ್ರಮುಖರಾದ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಪ್ರಕಾಶ್ ಅಂಚನ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ವಿಶ್ವನಾಥ ಚಂಡ್ತಿಮಾರ್ ಈ ಸಂದರ್ಭ ಉಪಸ್ಥಿತರಿದ್ದರು. ಇದೇ ವೇಳೆ ಶಾಸಕರು ಆಸ್ಪತ್ರೆಯ ಅಭಿವೃದ್ಧಿ ಕೆಲಸಗಳ ಯೋಜನೆಯನ್ನು ಪರಿಶೀಲಿಸಿದರು. ಹೊಸ ವ್ಯವಸ್ಥೆಗಳು ನಿರ್ಮಾಣವಾದಾಗ ಸಿಬ್ಬಂದಿ ಕೊರತೆಯಾಗದಂತೆ ಭವಿಷ್ಯದಲ್ಲಿ ಗಮನಹರಿಸುವುದಾಗಿ ಶಾಸಕರು ಈ ಸಂದರ್ಭ ಭರವಸೆ ನೀಡಿದರು.