www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಬಂಟ್ವಾಳದಿಂದ ಅನತಿ ದೂರದಲ್ಲಿರುವ ಜಕ್ರಿಬೆಟ್ಟು, ಚಂಡ್ತಿಮಾರ್, ಮಣಿಹಳ್ಳ ಭಾಗದ ನೆಟ್ವರ್ಕ್ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದ್ದು, ಏರ್ ಟೆಲ್ ಸಂಸ್ಥೆ ಜಕ್ರಿಬೆಟ್ಟಿನಲ್ಲಿ ಟವರ್‌ವೊಂದನ್ನು ಅನುಷ್ಠಾನಿಸಿದೆ. ಈಗಾಗಲೇ ಟವರ್ ಪ್ರಾಯೋಗಿಕ ಕಾರ್ಯ ಆರಂಭಿಸಿದ್ದು, ಮಾ.12ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.
ಜಕ್ರಿಬೆಟ್ಟು-ಚಂಡ್ತಿಮಾರ್ ಭಾಗದ ನಾಗರಿಕರು ನೆಟ್‌ವರ್ಕ್ ಸಮಸ್ಯೆ ಅನುಭವಿಸುತ್ತಿರುವ ಪರಿಣಾಮ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್‌ಗಾಗಿ ನೆಟ್‌ವರ್ಕ್ ಹುಡುಕಿಕೊಂಡು ನೇತ್ರಾವತಿ ನದಿ ಕಿನಾರೆಗೆ ಹೋಗಬೇಕಾದ ಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳು ಈ ರೀತಿ ನದಿ ಬದಿಗೆ ಹೋಗುತ್ತಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದೆ.ಇದೀಗ ಏರ್‌ಟೆಲ್ ಕಂಪನಿ ಜಕ್ರಿಬೆಟ್ಟುನ ಖಾಸಗಿ ಜಮೀನೊಂದರಲ್ಲಿ ಟವರ್‌ವೊಂದನ್ನು ಅನುಷ್ಠಾನಿಸಿದ್ದಾರೆ. ಪ್ರಸ್ತುತ ಆ ಭಾಗದ ನಾಗರಿಕರಿಗೆ ಮನೆಯ ಒಳಗೆ ಕೂತರೂ ವೇಗವಾಗಿ ನೆಟ್‌ವರ್ಕ್ ಸಿಗುತ್ತಿದೆ ಎಂದು ಸ್ಥಳೀಯ ನಾಗರಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಾವು ಈ ಹಿಂದೆಯೇ ಟವರ್ ಅನುಷ್ಠಾನಗೊಳಿಸುವ ಪ್ರಯತ್ನ ನಡೆಸಿದ್ದರೂ ಅದು ಹಲವು ಕಾರಣಕ್ಕೆ ಸ್ಥಗಿತಗೊಂಡಿದೆ. ಇದೀಗ ಎಲ್ಲಾ ರೀತಿಯ ತಾಂತ್ರಿಕ ಸಮಸ್ಯೆ ಸರಿಪಡಿಸಿ ಟವರ್ ಅನುಷ್ಠಾನಗೊಳಿಸಿರುವುದಾಗಿ ಏರ್ ಟೆಲ್ ಸಂಸ್ಥೆಯ ಏರಿಯಾ ಮ್ಯಾನೇಜರ್ ಶೈಲೇಶ್ ಹೇಳಿದರು. ಇಲ್ಲಿ ಟವರ್ ನಿರ್ಮಾಣ ಕ್ಕೆ ಸ್ಥಳೀಯ ನಿವಾಸಿ ಸಾಮಾಜಿಕ ಕಾರ್ಯ ಕರ್ತ ವಸಂತ ಭಂಡಾರಿ ಹಾಗೂ ಏರ್ ಟೆಲ್ ವಿತರಕ ಹರ್ಷರಾಜ್ ಅವರು ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.