www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ:ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಕೆಂಪುಕೋಟೆಯಲ್ಲಿ ಧ್ವಜ ಹಾರಿಸುವ ಕುರಿತ ಹೇಳಿಕೆಯನ್ನು ಖಂಡಿಸಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನ ಫ್ಲೈಓವರ್ ಪಕ್ಕದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ ಮತ್ತು ಈಶ್ವರಪ್ಪ ಅವರ ಪ್ರತಿಕೃತಿ ದಹನ ನಡೆಯಿತು.
ಸ್ವಾತಂತ್ರ್ಯ ಹೋರಾಟದ ಅರ್ಥವೇ ಗೊತ್ತಿಲ್ಲದ ಬಿಜೆಪಿ ಮತ್ತು ಸಂಘ ಪರಿವಾರ ಸದಾ ಇಂಥ ಕೆಲಸ ಮಾಡುತ್ತಾ ಬಂದಿದ್ದು, ಪ್ರತಿ ಬಾರಿಯೂ ಈಶ್ವರಪ್ಪ ವಿವಾದಕ್ಕೆಡೆಮಾಡುವ ಹೇಳಿಕೆಗಳನ್ನು ನೀಡಿದ್ದು, ಇನ್ನೂ ಮುಂದುವರಿದಿದೆ. ಅವರು ರಾಜೀನಾಮೆ ಕೊಡುವವರೆಗೆ ಹೋರಾಟ ನಡೆಯಲಿದೆ ಎಂದು ರೈ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ಮಾತನಾಡಿ, ಸಚಿವ ಈಶ್ವರಪ್ಪನವರು ತಮ್ಮ ಘನತೆಯನ್ನು ಮರೆತು ಧರ್ಮ, ಕೇಸರಿ ಧ್ವಜದ ಕುರಿತು ಮಾತನಾಡುವ ಸಂದರ್ಭ ರಾಷ್ಟ್ರಧ್ವಜವನ್ನು ಅಪಮಾನಿಸಿದ್ದು, ದೇಶಪ್ರೇಮಿಗಳಾದ ನಾವೆಲ್ಲರೂ ಖಂಡಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಎಂ.ಎಸ್.ಮಹಮ್ಮದ್ ಹಾಗೂ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್‌ಕುಮಾರ್ ಶೆಟ್ಟಿ, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಲೋಲಾಕ್ಷ ಶೆಟ್ಟಿ, ಗಾಯತ್ರಿ, ವಾಸು ಪೂಜಾರಿ ಲೊರೆಟ್ಟೊ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸುದರ್ಶನ್ ಜೈನ್, ಐಡಾ ಸುರೇಶ್, ಮಧುಸೂದನ್ ಶೆಣೈ, ಜಗದೀಶ್ ಕೊಯಿಲ, ವೆಂಕಪ್ಪ ಪೂಜಾರಿ, ಪದ್ಮನಾಭ ನರಿಂಗಾನ, ಸುಭಾಶ್ಚಂದ್ರ ಶೆಟ್ಟಿ, ಲೋಕೇಶ್ ಸುವರ್ಣ, ಮಲ್ಲಿಕಾ ಪಕ್ಕಳ ಮೊದಲಾದವರಿದ್ದರು.ಈ ವೇಳೆ ಸಚಿವ ಈಶ್ವರಪ್ಪ ಅವರ ಪ್ರತಿಕೃತಿಯನ್ನು ದಹಿಸಲಾಯಿತು.